ಅಧಿಕಾರ ಹೋದ್ರೂ ವಿಚಾರಧಾರೆಯಲ್ಲಿ ಬದಲಾವಣೆ ಇಲ್ಲ: ಸತೀಶ್​ ಜಾರಕಿಹೊಳಿ

ಬೆಳಗಾವಿ: ಅಮವಾಸ್ಯೆ ದಿನದಂದು ಶುಭಕಾರ್ಯ ಮಾಡಬಾರದು ಎಂದು ಹೇಳುತ್ತಾರೆ. ಆದರೆ, ಬೆಳಗಾವಿಯಲ್ಲಿ ಇಂದು ಒಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಲ್ಲೂ ಸ್ಮಶಾನದಲ್ಲಿ ಮದುವೆ ಆಗಿದ್ದಾರೆ.  ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿರುವ ಬೆಳಗಾವಿಯ ಸದಾಶಿವ ನಗರದಲ್ಲಿ ನವ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು.

ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಹಿನ್ನೆಲೆ, ಪರಿವರ್ತನಾ ದಿನವಾಗಿ ಸ್ಮಶಾನದಲ್ಲಿ ಮದುವೆ ಕಾರ್ಯಕ್ರಮ ನಡೆಯಿತು. ಸೋಪಾನ ಜಾಂಬೋಟಿ ಜೊತೆ ರೇಖಾ ಬಾಗೇವಾಡಿ ಸ್ಮಶಾನದಲ್ಲಿ ಮದುವೆ ಆಗಿರುವ ನವಜೋಡಿ. ಮದುವೆಯಲ್ಲಿ ಕುವೆಂಪು ಮಂತ್ರ ಮಾಂಗಲ್ಯ ಮೂಲಕ ದಾಂಪತ್ಯ ಜೀವನ ಪ್ರವೇಶಿದರು.

ಈ ವೇಳೆ ಮಾತನಾಡಿದ ಶಾಸಕ ಸತೀಶ್​ ಜಾರಕಿಹೊಳಿ, ಮಾನವ ಬಂಧುತ್ವ ವೇದಿಕೆ ಕಾರ್ಯಗಳು ಜನರಿಗೆ ಮುಟ್ಟಬೇಕು. ಸಂವಿಧಾನ ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಸಂವಿಧಾನ ಬರೆದಿದ್ದು ಅಂಬೇಡ್ಕರ್ ಅದರ ಲಾಭವನ್ನು ಎಲ್ಲರೂ ಪಡೆಯುತ್ತಿದ್ದಾರೆ. ಸ್ಮಶಾನದಲ್ಲಿ ಅಂತರ್ಜಾತಿ ಮದುವೆ ಭಾರತ ದೇಶದಲ್ಲಿ ಪ್ರಥಮವಾಗಿ ನಡೆದಿದೆ. ಜೋತಿಷಿಗಳನ್ನು ಕೇಳಿ ಮದುವೆ, ಮನೆ ಗೃಹ ಪ್ರವೇಶ ಮಾಡಿ ವಿಜೃಂಭಣೆಯ ಮದುವೆಗಳು ಮುರಿದೆ ಬಿದ್ದಿವೆ ಎಂದರು.

ಇನ್ನು, ಕಳೆದ ಚುನಾವಣೆಯಲ್ಲಿ ನಾನು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಕ್ಕೆ ಗೆಲುವಿನ ಮತ ಅಂತರ ಕಡಿಮೆ ಆಗಿದೆ ಎಂಬುದು ಸುಳ್ಳು. ಕಡಿಮೆ ಖರ್ಚಿನಲ್ಲಿ ನಾನು ಗೆದ್ದು ಬಂದಿದ್ದೇನೆ. ಪ್ರಸ್ತುತ ದಿನಗಳಲ್ಲಿ ಚುನಾವಣೆ ಗೆಲ್ಲಲು ಇಡೀ ಕುಟುಂಬವೇ ಹೋರಾಟ ಮಾಡೋ ಸ್ಥಿತಿ ಎದುರಾಗಿದೆ. ಆದರೆ ನಾನು ಕ್ಷೇತ್ರಕ್ಕೆ ಹೋಗದೇ ಗೆದ್ದಿದ್ದೇನೆ. ಸಾರಾಯಿ ಹಂಚದೇ‌ 3 ಚುನಾವಣೆಯಲ್ಲಿ ಗೆದ್ದಿದ್ದೇನೆ. ಮುಂದಿನ ಚುನಾವಣೆಯಲ್ಲಿ ಲೀಡ್​​ ತೋರಿಸುತ್ತೇನೆ. ಜನರನ್ನು ದುಡ್ಡಿನಿಂದ ಖರೀದಿಸಬಾರದು ಎಂಬ ಉದ್ದೇಶವಿದೆ. ಮುಂದಿನ ಬಾರಿಯೂ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇನೆ. ರಾಜ್ಯದಲ್ಲಿ ಬಂಗಾರಪ್ಪ ಮಾತ್ರ ಮೌಢ್ಯ ವಿರೋಧಿ ಪ್ರಯೋಗ ಮಾಡಿದ್ದರು. ನನಗೆ ಅಧಿಕಾರ ಹೋದ್ರೂ ವಿಚಾರಧಾರೆಯಲ್ಲಿ ಬದಲಾವಣೆ ಇಲ್ಲ. ಸ್ಮಶಾನದಲ್ಲಿ ಕಾರ್ಯಕ್ರಮ ಮಾಡಿ 5 ವರ್ಷದಲ್ಲಿ ಆರ್ಥಿಕ ವೃದ್ಧಿಯಾಗಿದೆ. ಮೌಢ್ಯ ವಿರುದ್ಧ ಅನೇಕ ವರ್ಷಗಳಿಂದ ಹೋರಾಟ ಮಾಡಿದ್ದೇನೆ. ಅಂಬೇಡ್ಕರ್, ಬುದ್ದ, ಬಸವ ನಮಗೆ ಆದರ್ಶರಾಗಿರುತ್ತಾರೆ. ಬುದ್ದ, ಬಸವ, ಅಂಬೇಡ್ಕರ್​​ ಬಗ್ಗೆ ಸ್ಪರ್ಧೆ ಮಾಡಿ ಸ್ಪರ್ಧೆಯಲ್ಲಿ ವಿಜೇತರಿಗೆ ಹೆಲಿಕಾಪ್ಟರ್​​ನಲ್ಲಿ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಈ ಸ್ಪರ್ಧೆಯನ್ನು ನಾಳೆಯಿಂದಲೇ ಪ್ರತಿಶಾಲೆಯಲ್ಲಿ ಆರಂಭಿಸುತ್ತೇವೆ. ಶಾಲಾ ಮಕ್ಕಳಿಗೆ ಸತ್ಯ ಇತಿಹಾಸ ತಿಳಿಸುವ ಕೆಲಸ ಮಾಡುತ್ತೇವೆ. ನಾನು ಶಾಲಾ ಬಾಲಕನಿದ್ದಾಗಿನಿಂದಲೇ ಮೂಢನಂಬಿಕೆ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದೇನೆ. ಇದೇ ರೀತಿಯ ವಿಚಾರಧಾರೆಗಳು ಮುಂದೆ ಇರುತ್ತವೆ ಎಂದು ಸತೀಶ್​​ ಜಾರಕಿಹೊಳಿ ಹೇಳಿದರು.