ಬರಿದಾದ ಎಟಿಎಂಗೆ ನಗರದಲ್ಲಿ 9, ಹಳ್ಳಿಯಲ್ಲಿ 6 ಗಂಟೆ ನಂತರ ತುಂಬಲ್ಲ ಹಣ..!

ನವದೆಹಲಿ: ಪ್ರಸ್ತುತ ಎಟಿಎಂಗೆ ಹಣ ತುಂಬುವ ವಾಹನದ ಮೇಲೆ ಹಲ್ಲೆ ಹಾಗೂ ಎಟಿಎಂ ದರೋಡೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಅವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ಎಟಿಎಂ ನಿಯಮದಲ್ಲಿ ಬದಲಾವಣೆ ಮಾಡಲು ಗೃಹ ಸಚಿವಾಲಯ ನಿರ್ಧರಿಸಿದೆ. ಈ ಸಂಬಂಧ ಅದು ಆದೇಶವೊಂದನ್ನ ಹೊರಡಿಸಿದೆ.

ಮುಂದಿನ ವರ್ಷದಿಂದ ಈ  ಆದೇಶ ಜಾರಿಗೆ ಬರಲಿದ್ದು, ನಗರ ಪ್ರದೇಶದ ಜೊತೆ ಗ್ರಾಮೀಣ ಪ್ರದೇಶಕ್ಕೂ ಅನ್ವಯವಾಗಲಿದೆ. ಇನ್ನು ಮುಂದೆ ಎಟಿಎಂ ಬರಿದಾದರೆ ನಗರ ಪ್ರದೇಶದಲ್ಲಿ ರಾತ್ರಿ 9 ಗಂಟೆಯ ನಂತರ, ಗ್ರಾಮೀಣ ಪ್ರದೇಶದಲ್ಲಿ ಸಂಜೆ 6 ಗಂಟೆಯ ಬಳಿಕ ಹಾಗೂ ನಕ್ಸಲ್​ ಪೀಡಿತ ಪ್ರದೇಶಗಳಲ್ಲಿ ಸಂಜೆ 4 ಗಂಟೆಯ ಬಳಿಕ ಎಟಿಎಂಗೆ ಹಣ ತುಂಬದಂತೆ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಅಲ್ಲದೇ  ದಿನದ ಮೊದಲಾರ್ಧ ಖಾಸಗಿ ನಗದು ನಿರ್ವಹಣೆ ಏಜೆನ್ಸಿಗಳು ಬ್ಯಾಂಕಿನಿಂದ ಹಣವನ್ನು ಸಂಗ್ರಹಿಸಬೇಕು ಹಾಗೂ ಅದನ್ನು ಶಸ್ತ್ರಸಜ್ಜಿತ ವಾಹನಗಳಲ್ಲಿ ಮಾತ್ರ ಸಾಗಣೆ ಮಾಡಬೇಕು ಎಂದು ತಿಳಿಸಿದೆ. ಗೃಹ ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ಈ ಆದೇಶ ಮುಂದಿನ ವರ್ಷದ ಫೆಬ್ರವರಿಯಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ದೇಶಾದ್ಯಂತ 8,000 ಕ್ಕಿಂತಲೂ ಹೆಚ್ಚು ಖಾಸಗೀ ಮಾಲೀಕತ್ವದ ನಗದು ತುಂಬುವ ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv