ಉದ್ಯಮಿ ನೀರವ್​​ಮೋದಿ ವಿರುದ್ಧ ಜಾಮೀನು ರಹಿತ ವಾರೆಂಟ್

ಮುಂಬೈ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಸುಮಾರು 13ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೆ, ವಂಚನೆ ಮಾಡಿರುವ ವಜ್ರ ಉದ್ಯಮಿ ನೀರವ್​ಮೋದಿ ವಿರುದ್ಧ ಮುಂಬೈನ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದೆ.
ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ವಂಚನೆ ಪ್ರಕರಣ ಸಂಬಂಧ ಉದ್ಯಮಿ ನೀರವ್‌ಮೋದಿ ವಿರುದ್ಧ ತ್ವರಿತವಾಗಿ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವಂತೆ ಇಂಟರ್‌ಪೋಲ್‌ಗೆ ಸಿಬಿಐ ಸೋಮವಾರವಷ್ಟೇ ಮನವಿ ಮಾಡಿದ ಬೆನ್ನಲ್ಲೇ ಮುಂಬೈನ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ನೀರವ್​​ಮೋದಿ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿ ಆದೇಶಿಸಿದೆ.

ಉದ್ಯಮಿ ನೀರವ್​ ಮೋದಿ, ಕುಟುಂಬದ ಸದಸ್ಯರು ಸೇರಿದಂತೆ 10ಮಂದಿ ವಿರುದ್ಧ ನ್ಯಾಯಧೀಶ ಅಲ್ಮಾನ್​ ಅಜ್ಮಿ ಸ್ಪೆಷಲ್​ ಪ್ರಿವೆನ್ಸನ್​ ಆಫ್ ಮನಿ ಲಾಂಡರಿಂಗ್​ ಆಕ್ಟ್​ ಅಡಿ ಪಿಎಂಎಲ್​ಎ ನಾನ್​ ಬೇಲೇಬಲ್​ ವಾರೆಂಟ್ ಜಾರಿ ಮಾಡಿದ್ದಾರೆ. ಪಿಎನ್​ಬಿ ಹಗರಣಕ್ಕೆ ಸಂಬಂಧಿಸಿದಂತೆ ನೀರವ್​​ಮೋದಿ, ತಂದೆ ದೀಪಕ್​ಮೋದಿ ಸೇರಿದಂತೆ 23ಜನರ ವಿರುದ್ಧ ಇಡಿ ಸುಮಾರು 12ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದೆ.
ಬ್ಯಾಂಕ್​ಗೆ ಸಾಲ ಮರುಪಾವತಿ ಮಾಡದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ನೀರವ್​ಮೋದಿ ಬ್ರಿಟನ್‌ನಲ್ಲಿರುವುದನ್ನ ಅಲ್ಲಿನ ಸರ್ಕಾರ ಖಚಿತಪಡಿಸಿದೆ. ಅವರನ್ನು ದೇಶಕ್ಕೆ ಆದಷ್ಟು ಬೇಗ ಹಸ್ತಾಂತರಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆಯನ್ನೂ ನೀಡಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv