ನಿಮ್ಮ ಫೋನ್​ ಮಾತ್ರ ಸ್ಮಾರ್ಟ್​​ ಅಲ್ಲ, ಇನ್ನು ನಿಮ್ಮ ಶೂಗಳೂ ಸಖತ್ ಸ್ಮಾರ್ಟ್..!

ಶೂಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ಬಣ್ಣ ಬಣ್ಣದ, ವಿವಿಧ ಕ್ವಾಲಿಟಿಯ, ಲೆದರ್, ಕ್ಯಾನ್ವಾಸ್, ಕುಶನ್ ಹೀಗೆ ಭಿನ್ನ-ವಿಭಿನ್ನ ಶೂಗಳು ಅಂದ್ರೆ ಅಟ್ರಾಕ್ಟ್​ ಆಗದವರೇ ಇಲ್ಲ. ಅದ್ರಲ್ಲೂ ಕ್ರೀಡಾಪಟುಗಳಿಗಂತೂ ಶೂಗಳು ಅತೀ ಮುಖ್ಯ, ವಿವಿಧ ಕ್ರೀಡೆಗಳ ಅನುಕೂಲಗಳಿಗೆ ತಕ್ಕಂತೆ ಶೂಗಳನ್ನ ಡಿಸೈನ್ ಮಾಡಲಾಗುತ್ತದೆ. ಜೊತೆಗೆ ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆಗಳನ್ನ ನಿಗದಿ ಮಾಡಿರುತ್ತಾರೆ. ಇದುವರೆಗೂ ನಾವು ಸಾವಿರಾರು ರೂಪಾಯಿ ಮೌಲ್ಯದ ಶೂಗಳನ್ನ ಬಳಸಿದ್ದೇವೆ ಹಾಗೂ ಕೇಳಿದ್ದೇವೆ. ಅದ್ರಲ್ಲೂ ಸ್ಪೋರ್ಟ್ಸ್​​ ಶೂಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​, ಅಷ್ಟೇ ಕಾಸ್ಟ್ಲೀ ಕೂಡ ಹೌದು. ಇದೀಗ ನೈಕ್ ಕಂಪೆನಿ ಬಾಸ್ಕೇಟ್​ ಬಾಲ್​​ ಆಟಗಾರರಿಗೆ ಹೊಸ ಶೂ ಒಂದನ್ನ ಪರಿಚಯಿಸಲು ಮುಂದಾಗಿದೆ. ಬಾಸ್ಕೇಟ್​ ಬಾಲ್​ ಆಟಗಾರರಿಗಾಗಿಯೇ ನೂತನ ಹಾಗೂ ವಿಭಿನ್ನವಾಗಿರುವ Nike Adapt BB ಅನ್ನೋ ಶೂ ಒಂದನ್ನ ಡಿಸೈನ್ ಮಾಡಿದೆ. ಇದು ಎಲ್ಲಾ ಶೂಗಳಂತಲ್ಲ, ಕ್ರೀಡೆಗಾಗಿಯೇ ಸ್ಪೆಷಲ್ಲಾಗಿ ಅಭಿವೃದ್ಧಿಪಡಿಸಲಾಗಿದೆ. ನೂತನ ಶೂನಲ್ಲಿ ಲೇಸ್​​ಗಳನ್ನ ಕಟ್ಟುವ ಪ್ರಮೆಯವೇ ಬರೋದಿಲ್ಲ. ಸ್ಟೇಡಿಯಂನಲ್ಲಿ ಕ್ರೀಡಾಪಟು ಇಡುವ ಪ್ರತಿ ಹೆಜ್ಜೆಗೆ ಅನುಸಾರವಾಗಿ ಶೂ ಆಟೋಮ್ಯಾಟಿಕ್ ಫಿಟ್​ ಆಗಿರೋದ್ರ ಜೊತೆಗೆ ವೇಗವಾಗಿ ಆಡಲು ಅನುಕೂಲವಾಗುತ್ತದೆ.

ಶೂಗಾಗಿಯೇ ಆ್ಯಪ್​..!
ಶೂ ತೆಗೆದುಕೊಂಡ ಮೇಲೆ ಕ್ರೀಡಾಪಟು ತಮ್ಮ ಸ್ಮಾರ್ಟ್​ಫೋನ್​​ನಲ್ಲಿ ನೈಕ್ ಅಡಾಪ್ಟ್​​ ಆ್ಯಪ್​​ ಕನೆಕ್ಟ್​ ಹೊಂದಿರಬೇಕು. ಈ ಆ್ಯಪ್​​ನ ಸಹಾಯದಿಂದ ಮೈದಾನದಲ್ಲಿ ಆಟಗಾರನ ಪರ್ಫಾರ್ಮೆನ್ಸ್​ಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತ ಹೋಗುತ್ತದೆ.

ಚಾರ್ಜಿಂಗ್ ಪ್ಯಾಡ್​..!
Nike Adapt BB ಇದು ಸ್ವಲ್ಪ ಡಿಫ್ರೆಂಟ್.. ಇದು ಮಾಮೂಲಿ ಶೂಗಳಂತಲ್ಲ. ಆಗಾಗ ಚಾರ್ಜಿಂಗ್ ಕೂಡ ಮಾಡಿಕೊಳ್ಳುತ್ತಿರಬೇಕು. ಅದಕ್ಕಾಗಿ ಕಂಪೆನಿ ಶೂ ಜೊತೆಗೆ ಚಾರ್ಜಿಂಗ್ ಪ್ಯಾಡ್ ಕೂಡ ನೀಡುತ್ತದೆ.

ಮುಂದಿನ ತಿಂಗಳು ಮಾರುಕಟ್ಟೆಗೆ

ವಿಭಿನ್ನವಾಗಿ ಅಭಿವೃದ್ಧಿಪಡಿಸಿರುವ ಶೂಗಳನ್ನ ನೈಕ್​ ಕಂಪೆನಿ ಮುಂದಿನ ತಿಂಗಳು ಲಾಂಚ್​ ಮಾಡಲು ನಿರ್ಧರಿಸಿದೆ. 2018ರಲ್ಲಿಯೇ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆ ಇಟ್ಕೊಂಡಿದ್ದ ಕಂಪೆನಿ ಕಾರಣಾಂತರಗಳಿಂದ ಫೆಬ್ರವರಿಯಲ್ಲಿ ಲಾಂಚ್ ಆಗಲಿದೆ. ಕ್ರೀಡಾಪಟುಗಳಿಂದ ಭಾರೀ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆಯನ್ನ ಕಂಪೆನಿ ಹೊಂದಿದೆ.

ಹೊಸ ಮೂವ್​ಮೆಂಟ್..! ಈ ಶೂಗಳನ್ನ ಹಾಕಿ ಮೈದಾನಕ್ಕೆ ಇಳಿದಾಗ ಹೊಸ ಮೂವ್​ಮೆಂಟ್​ನ ಅನುಭವ ಕ್ರೀಡಾಪಟುಗೆ ಸಿಕ್ಕಂತಾಗುತ್ತದೆ. ಜೊತೆಗೆ ಕ್ರೀಡಾಪಟುವಿನ ಸಾಮರ್ಥ್ಯ ಕೂಡ ಹೆಚ್ಚಿಸುತ್ತದೆ. ಅಲ್ಲದೇ ಮೈದಾನದಲ್ಲಿ ವಾರ್ಮ್​​ ಅಪ್​ ಮಾಡುವಾಗಲೂ ಕೂಡ ಕ್ರೀಡಾಪಟುಗಳಿಗೆ ಖುಷಿ ನೀಡಲಿದೆ ಅಂತಾ ಕಂಪೆನಿ ಹೇಳಿದೆ. ಆಟಗಾರ ಮೈದಾನದಲ್ಲಿ ಕಾಲಿಟ್ಟಾಗ ನೈಕ್​ ಅಡಾಪ್ಟ್​​ ಬಿಬಿಗೆ ಅಳವಡಿಸಲಾಗಿರುವ ಕಸ್ಟಮ್ ಮೋಟರ್ ಹಾಗೂ ಗೇರ್​​ ಆಟಗಾರನ ಚಲನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತದೆ.

ಸದ್ಯ, ಈ ಶೂಗೆ 24, 900 ರೂಗಳ ದರವನ್ನ ನಿಗದಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯನ್ನ ನಾವು ಹೊಂದಿದ್ದೇವೆ. ಬಾಸ್ಕೆಟ್​ ಬಾಲ್​ ಆಟಗಾರ, ಶೂ ಹಾಕಿ ಮೈದಾನಕ್ಕೆ ಇಳಿದಾಗ ಆಟಗಾರನ ರಕ್ತದ ಏರಿಳಿತಕ್ಕೆ ತಕ್ಕಂತೆ ಈ ಶೂ ಅಡ್ಜೆಸ್ಟ್​ ಆಗಲಿದೆ. ಸಾಮಾನ್ಯವಾಗಿ ಮೈದಾನದಲ್ಲಿರುವ ಕ್ರೀಡಾಪಟುವಿನ ರಕ್ತದೊತ್ತಡ ಕ್ಷಣಕ್ಷಣಕ್ಕೂ ಚೇಂಜ್ ಆಗುತ್ತಲೇ ಇರುತ್ತದೆ ಅದಕ್ಕೆ ತಕ್ಕಂತೆ ಬದಲಾವಣೆಯಾಗುತ್ತದೆ ಅಂತಾ ಎರಿಕ್ ಅವರ್, ನೈಕ್ ಕ್ರಿಯೇಟಿವ್ ಡೈರೆಕ್ಟರ್ ಆಫ್ ಇನೋವೆಷನ್ ತಿಳಿಸಿದ್ದಾರೆ.