ನಿತ್ಯವೂ ಕೊಲೆ ಬೆದರಿಕೆಯ ಕರೆ ಬರುತ್ತಿವೆ: ನಿಜಗುಣಾನಂದ ಸ್ವಾಮೀಜಿ

ಬೆಳಗಾವಿ: ಸಂಪ್ರದಾಯವಾದಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಾವು ಒದ್ದಾಡುತ್ತಿದ್ದೇವೆ. ನಿತ್ಯವೂ ನನಗೆ ಕೊಲೆ ಮಾಡ್ತೀನಿ ಅಂತಾ ಬೆದರಿಕೆಯ ಪೋನ್ ಕರೆ ಬರುತ್ತಿವೆ. ನಿತ್ಯವೂ ನಾನು ಆತಂಕದಲ್ಲಿ ಬದುಕುತ್ತಿದ್ದೇನೆ ಎಂದು ನಿಷ್ಕಮಂಟಪದ ನಿಜಗುಣಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.

ಡಾ.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಸದಾಶಿವ ನಗರದಲ್ಲಿರುವ ಸ್ಮಶಾನದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ, ಪ್ರಗತಿಪರ ವಿಚಾರವಾದಿಗಳಾಗಿ ಜೀವನವನ್ನ ಅನುಭವಿಸುತ್ತೇವೆ. ಜೀವನವನ್ನ ನಾವು ಪ್ರೀತಿಸುತ್ತಿದ್ದೇನೆ. ಕೆಲ ಸ್ವಾಮೀಜಿಗಳೇ ಷಡ್ಯಂತ್ರ ರೂಪಿಸುತ್ತಿದ್ದಾರೆ. ನಮ್ಮ ಪ್ರಗತಿಪರ ವಿಚಾರಗಳನ್ನ ಅವರಿಗೆ ಸಹಿಸಲಾಗುತ್ತಿಲ್ಲ. ಸಂಪ್ರದಾಯವಾದಿಗಳ ಅಟ್ಟಹಾಸ ಹಿಂದಿನವರಿಗಿಂತ ಇಂದು ಹೆಚ್ಚಾಗಿದೆ. ಕುಳಿತವರು ನೀವು ಭಾಷಣ ಕೇಳಿ ಹೋಗುತ್ತೀರಿ. ಆದರೆ ಭಾಷಣ ಮಾಡುವವರು ನಾವು ಸಂಕಷ್ಟದಲ್ಲಿದ್ದೇವೆ. ನಿತ್ಯವೂ ಸಂಪ್ರದಾಯವಾದಿಗಳು ನನ್ನ ಭಾಷಣ ರೆಕಾರ್ಡ್‌ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ. ಈ ಸಮಾಜದಲ್ಲಿ ಶಂಕರಾಚಾರ್ಯ, ಮದ್ವಚಾರ್ಯರಿಂದ ನ್ಯಾಯ ಸಿಗಲಿಲ್ಲ. ಆದರೆ ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ನಮಗೆ ನ್ಯಾಯ ಸಿಕ್ಕಿದೆ ಎಂದರು.

ಸಂವಿಧಾನ ಬದಲಿಸಲು ಹೊರಟಿರುವ ರಾಜಕಾರಣಿಗಳು, ಪಕ್ಷಗಳು ನಮ್ಮ ದೇಶದಲ್ಲಿರುವಾಗ ಇರುವಾಗ ನಮ್ಮಂತವರನ್ನ ಕೊಲ್ಲುವುದು ಯಾವ ದೊಡ್ಡ ವಿಚಾರ. ನೀವು‌ ಮೀಸಲಾತಿ ದಲಿತರಾಗಬೇಡಿ. ಮೀಸಲಾತಿ ಪಡೆಯುವ ದಲಿತರಾದರೆ ನೀವು ಅಂಬೇಡ್ಕರ್​ಗೆ ಮಾಡಿದ ಅವಮಾನವಾಗುತ್ತದೆ. ಉತ್ತರ ಭಾರತದಲ್ಲಿ ರಾಮನನ್ನ‌ ಹಿಡಿದುಕೊಂಡು ಮತ್ತೆ ದಕ್ಷಿಣದಲ್ಲಿ ಅಯ್ಯಪ್ಪನನ್ನ ಹಿಡಿದುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನ್ಯಾಯಾಲಯದ ತೀರ್ಪನ್ನ ಉಲ್ಲಂಘಿಸುವುದಾದರೆ ಎಲ್ಲಿದೆ ಸ್ವಾಮಿ ಪ್ರಜಾಪ್ರಭುತ್ವ..? ನಾವು ಯಾರ ವಿರೋದಿಗಳಲ್ಲ, ಬ್ರಾಹ್ಮಣರ ವಿರೋದಿಗಳಲ್ಲ. ಬಹಳಷ್ಟು ಜನ ನನಗೆ ಫೋನ್ ಮಾಡಿ ಹೇಳ್ತಾರೆ. ಮಾತನಾಡದಂತೆ ನಡೆಯಿರಿ ಅಂತಾ ನನಗೆ ಬುದ್ದಿವಾದ ಹೇಳ್ತಾರೆ. ಕಾವಿ ಈ ದೇಶದಲ್ಲಿ ಭಯ ಹುಟ್ಟಿಸಿದ್ದರಿಂದ ಆ ಭಯ ಹೋಗಲಾಡಿಸಲು ನಾನು ಕಾವಿ ತೊಟ್ಟಿದ್ದೇನೆ. ನಿಜಗುಣಾನಂದ ಸ್ವಾಮೀಜಿ ಹೆಸರಿನಲ್ಲಿ ಬ್ಯಾಂಕ್​​ನಲ್ಲಿ ₹ 50 ಸಾವಿರ ಡಿಪಾಜಿಟ್ ಇದೆ ಅನ್ನೂದಾದ್ರೆ ನಾನು ಇವತ್ತೇ ಕಾವಿ ತ್ಯೇಜಿಸುತ್ತೇನೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv