ರಾಜ್ಯ ಸರ್ಕಾರಕ್ಕೆ ₹50 ಕೋಟಿ ದಂಡ ವಿಧಿಸಿದ ಎನ್​ಜಿಟಿ

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ₹50 ಕೋಟಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಕೆರೆಗಳ ಸಂರಕ್ಷಣೆ ಹಾಗೂ ರಾಜಕಾಲುವೆಗಳ ಒತ್ತುವರಿ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎನ್​ಜಿಟಿ ಅಭಿಪ್ರಾಯ ಪಟ್ಟಿದೆ.

ಜಲ ಮಾಲಿನ್ಯ ಒಂದು ಕ್ರಿಮಿನಲ್ ಅಫೆನ್ಸ್. ಸಂವಿಧಾನದ 12ನೇ ಶೆಡ್ಯೂಲ್​​ನಲ್ಲಿ ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಸರ್ಕಾರ ಭಾಗವಾಗಿದ್ದು, ನಿಯಮಗಳಿಗೆ ಹೊರತಾಗಿಯೂ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ನಿಯಮ ಪಾಲಿಸುವಲ್ಲಿ ವಿಫಲವಾಗಿದೆ ಎಂದು ಎನ್​ಜಿಟಿ ಅಭಿಪ್ರಾಯಪಟ್ಟಿದೆ.

ರಾಜ್ಯಸಭೆ ಜೆಡಿಎಸ್​ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆ ಹಾಗೂ ಕೆರೆ ಸಂರಕ್ಷಣೆ ಕುರಿತಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಎನ್​​ಜಿಟಿ ಅಧ್ಯಕ್ಷ ಎ.ಕೆ.ಗೋಯಲ್​ ನೇತೃತ್ವದ ಪೀಠ ಇಂದು ತೀರ್ಪು ನೀಡಿದೆ. ತೀರ್ಪನಲ್ಲಿ, ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ, ಸರ್ಕಾರಕ್ಕೆ ₹50 ಕೋಟಿ ಹಾಗೂ ಬಿಬಿಎಂಪಿಗೆ ₹25 ಕೋಟಿ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಹಸಿರು ಪ್ರಾಧಿಕಾರಕ್ಕೆ ವರ್ಗಾಹಿಸುವಂತೆ ತಿಳಿಸಿದೆ.

ಬೆಂಗಳೂರು ನಗರದ ಬೆಳ್ಳಂದೂರು ಕೆರೆ, ಅಗರ ಕೆರೆ ಹಾಗೂ ವರ್ತೂರು ಕರೆಗಳು ರಕ್ಷಣೆ ಆಗಿಲ್ಲ. ಮೊದಲು ಬೆಳ್ಳಂದೂರು ಕೆರೆ ಒತ್ತುವರಿ ತೆರವು ಗೊಳಿಸಬೇಕು ಎಂದು ಆದೇಶಿಸಿದೆ. ಮೀಸಲು ನಿಧಿಯನ್ನು ಕೆರೆ ಸಂರಕ್ಷಣೆಗೆ ಬಳಸುವಂತೆ ಸೂಚನೆ ನೀಡಿದೆ. ಈ ಕುರಿತು ಜನರ ಅಭಿಪ್ರಾಯ ಹಾಗೂ ದೂರು ದಾಖಲಿಸಿಕೊಳ್ಳಲು ವೆಬ್​ಸೈಟ್​ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಅಲ್ಲದೇ, ಜವಾಬ್ದಾರಿಯನ್ನ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆ ಆಗಲಿದ್ದಾರೆ ಎಂದು ಖಡಕ್​ ಸೂಚನೆ ನೀಡಿದೆ. ಕೆರೆ ಸಂರಕ್ಷಣೆ ಕುರಿತು ನಿವೃತ್ತ ನ್ಯಾ. ಸಂತೋಷ್​ ಹೆಗ್ಡೆ ನೇತೃತ್ವದ ಸಮಿತಿ ರಚಿಸಲು ಎನ್​ಜಿಟಿ ಆದೇಶಿಸಿದೆ.