ಸತತ 23ನೇ ಬಾರಿಗೆ ಎವರೆಸ್ಟ್​ ಏರಿ ದಾಖಲೆ ನಿರ್ಮಿಸಿದ ನೇಪಾಳದ ಪರ್ವತಾರೋಹಿ

ಭೂಮಿ ಮೇಲಿನ ಅತ್ಯಂತ ಎತ್ತರದ ಶಿಖರ ಮೌಂಟ್​​ ಎವರೆಸ್ಟ್​​ ಏರೋದು ಸುಲಭದ ಮಾತಲ್ಲ. ಕೊರೆಯೋ ಚಳಿಯಲ್ಲಿ ಪ್ರಾಣ ಕೈಯಲ್ಲಿಡಿದು 29,029 ಅಡಿ ಎತ್ತರದ ಪರ್ವತವನ್ನ ಏರಬೇಕು. ಹೀಗಾಗಿಯೇ ಮೌಂಟ್​ ಎವರೆಸ್ಟ್​ ಏರಿ ಬಂದಿದ್ದಾರೆ ಅಂದ್ರೆ ಅದು ದೊಡ್ಡ ಸಾಧನೆ. ಅದೆಷ್ಟೋ ಪರ್ವತಾರೋಹಿಗಳ ನಿತ್ಯ ಕನಸು ಎವರೆಸ್ಟ್ ಅನ್ನೋ ಶಿಖರ ಏರೋದು. ಆದ್ರೆ ಇಲ್ಲೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ 23 ಬಾರಿ ಮೌಂಟ್​ ಎವರೆಸ್ಟ್​ ಏರಿ ದಾಖಲೆ ಮಾಡಿದ್ದಾರೆ. ಇದು ನಮಗೆ ಸಾಧನೆಯಂತೆ ತೋರಿದ್ರೆ ಅವರಿಗೆ ಇದು ಪ್ರೊಫೆಷನ್ ಅಂತೆ.

ಹೌದು, ಮೌಂಟ್ ಎವರೆಸ್ಟ್​ ಏರೋಕೆ ಎರಡು ದಾರಿಗಳಿವೆ. ಒಂದು ನೇಪಾಳ ಮಾರ್ಗ ಮತ್ತೊಂಡು ಟಿಬೆಟ್​ನದ್ದು. ಮಾರ್ಚ್​​ನಿಂದ ಮೇ ತಿಂಗಳ ನಡುವೆ ಹವಾಮಾನ ಅನುಕೂಲಕರವಾಗಿರೋದ್ರಿಂದ ಈ ಸಮಯದಲ್ಲಿ ಮೌಂಟ್​ ಎವರೆಸ್ಟ್​ ಏರುವವರ ಸಂಖ್ಯೆ ಹೆಚ್ಚು. 49 ವರ್ಷ ವಯಸ್ಸಿನ ಕಾಮಿ ರಿಟಾ ಶೆರ್ಪಾ ಅನ್ನೋರು ನೇಪಾಳ ಮಾರ್ಗವಾಗಿ ಚಾರಣ ಶುರು ಮಾಡಿದ್ದರು. ಶೆರ್ಪಾಗಳು ಎತ್ತರದ ಪ್ರದೇಶಗಳಲ್ಲಿ ಹಾಗೂ ಕಡಿಮೆ ಆಮ್ಲಜನಕ ಇರುವ ವಾತಾವರಣವನ್ನ ಸಹಿಸಿಕೊಳ್ಳುವುದರಲ್ಲಿ ಶಕ್ತರಾಗಿರುತ್ತಾರೆ. ಹೀಗಾಗಿ ಎವರೆಸ್ಟ್​ ಏರಲು ಬಯಸುವ ಸಾಕಷ್ಟು ವಿದೇಶಿಗರಿಗೆ ಇವರು ಗೈಡ್​​ಗಳಾಗಿ ಕೆಲಸ ಮಾಡುತ್ತಾರೆ.

ಕಾಮಿ ರೀಟಾ ಶೆರ್ಪಾ ಸುಮಾರು 20 ವರ್ಷಗಳಿಂದ ಗೈಡ್​ ಆಗಿ ಕೆಲಸ ಮಾಡ್ತಿದ್ದಾರೆ. ನಿನ್ನೆ ಶೆರ್ಪಾ ಸೇರಿದಂತೆ 8 ಪರ್ವತಾರೋಹಿಗಳು ಎವರೆಸ್ಟ್​ ಶಿಖರ ತಲುಪಿದ್ದಾರೆ. ಶೆರ್ಪಾ ಸತತ 23ನೇ ಬಾರಿಗೆ ಎವರೆಸ್ಟ್​​ ಏರಿ ದಾಖಲೆ ಮಾಡಿದ್ದಾರೆ. ಕಳೆದ ವರ್ಷ ಕೂಡ ಅವರು 22ನೇ ಬಾರಿಗೆ ಎವರೆಸ್ಟ್​ ಏರಿ ತಮ್ಮದೇ ಹಿಂದಿನ ದಾಖಲೆಯನ್ನ ಮುರಿದಿದ್ದರು. ಶೆರ್ಪಾ ಮೊದಲ ಬಾರಿಗೆ ಎವರೆಸ್ಟ್​ ಏರಿದ್ದು 1994ರಲ್ಲಿ. ಇವರು ಎವರೆಸ್ಟ್​ ಮಾತ್ರವಲ್ಲದೆ ಜಗತ್ತಿನ ಎರಡನೇ ಎತ್ತರದ ಪರ್ವತವಾದ ಪಾಕಿಸ್ತಾನದ ಕೆ2 ಪರ್ವತ ಕೂಡ ಏರಿದ್ದಾರೆ. “ನಾನು ವಿಶ್ವ ದಾಖಲೆ ಮಾಡಬೇಕು ಅಂತ ಪರ್ವತಾರೋಹಣ ಮಾಡಿಲ್ಲ, ಇದು ನನ್ನ ಕೆಲಸ ಅಷ್ಟೇ. ಈ ಮುಂಚೆ ನನಗೆ ದಾಖಲೆ ನಿರ್ಮಿಸಬಹುದು ಅನ್ನೋದು ಕೂಡ ಗೊತ್ತಿರಲಿಲ್ಲ” ಅಂತಾರೆ ಶೆರ್ಪಾ.

ಇನ್ನು ನೇಪಾಳ ಈ ಬಾರಿ, ತಲಾ ₹7 ಲಕ್ಷದಂತೆ 378 ಜನರಿಗೆ ಪರ್ವತಾರೋಹಣ ಮಾಡಲು ಅನುಮತಿ ನೀಡಿದೆ. ಹೀಗಾಗಿ ಹವಾಮಾನದಲ್ಲಿ ವೈಪರಿತ್ಯವಾದ್ರೆ ಜನಜಂಗುಳಿ ಉಂಟಾಗೋ ಆತಂಕ ಕೂಡ ಇದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv