ನವಜಾತ ಶಿಶುಗಳ ಆರೈಕೆ ಮಾಡೋದು ಹೇಗೆ..?

ಬೆಂಗಳೂರು: ಈಗ ನವಜಾತ ಶಿಶು ಮನೆಯಲ್ಲಿದ್ರೇ ಅಂತೂ ಮನೆಯಲ್ಲಿರೋರಿಗೆ ಮೈಯೆಲ್ಲ ಎಚ್ಚರಿಕೆಯ ಕಣ್ಣಿರಬೇಕು. ಅಂತಹ ಹಾಲುಗಲ್ಲದ ಮಕ್ಕಳನ್ನ ನೋಡ್ಕೊಳ್ಳೋದು ತುಂಬಾನೆ ಕಷ್ಟ. ಎಷ್ಟೇ ಎಚ್ಚರಿಕೆಯಿಂದ ಇದ್ರೂ ಅಂತಹ ಶಿಶುಗಳಿಗೆ ಬೇಗನೆ ಇನ್ಫೆಕ್ಷನ್ ಬರುವುದು, ದೇಹದ ಉಷ್ಣಾಂಶ ಏರುಪೇರಾಗುವುದು ಮತ್ತು ಮೃದು ಚರ್ಮದ ಅಲರ್ಜಿಗಳಾಗುವ ಸಾಧ್ಯತೆಗಳೂ ಜಾಸ್ತೀನೇ ಇರುತ್ತೆ. ಅದ್ರಲ್ಲಂತೂ ಮಳೆಗಾಲ ಅಂದ್ರೆ ದೊಡ್ಡೋರ್ಗೇನೆ.. ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳೋ ಬೀರುತ್ತವೆ. ಅಂಥದ್ರಲ್ಲಿ ಈ ಪುಟ್ಟ ಮಕ್ಕಳಿಗಂತೂ ಸ್ವಲ್ಪ ಹೆಚ್ಚು ಕಾಳಜಿ ವಹಿಸೋದು ಅತ್ಯಂತ ಅವಶ್ಯಕ. ಇನ್ನು ನವಜಾತ ಶಿಶುಗಳ ಬಗ್ಗೆ ವೈದ್ಯರು ಹೇಳೊ ರೀತಿ ಪ್ರೀ-ಟರ್ಮ್ (9 ತಿಂಗಳಿಗಿಂತ ಮುಂಚೆ ಜನಿಸಿದ ಮಗು) ಅಂತಹ ಮಕ್ಕಳಲ್ಲಿ ಹೈಪರ್ ಥರ್ಮಿಯ(ದೇಹದ ಉಷ್ಣಾಂಶ ಕಳೆದುಕೊಳ್ಳುವುದು), ಸರಿಯಾಗಿ ಊಟ ಮಾಡದಿರುವುದು, ಇಂತಹ ತೊಂದರೆಗಳು ಆಗುವ ಸಾಧ್ಯತೆಗಳಿರುತ್ತವೆ. ಇನ್ನು ನವಜಾತ ಶಿಶುವಿನ ದೇಹದ ತೂಕ 2.5 ಯಿಂದ 3 ಕೆಜಿವರೆಗೂ ಇರಬೇಕು. 3 ಕೆ.ಜಿ ಗಿಂತ ಕಡಿಮೆ ಇರುವ ಮಕ್ಕಳಿಗೂ ಸಹ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದು ಮುತುವರ್ಜಿಯಿಂದ ಹೇಳುತ್ತಾರೆ ನಿಯೋನೆಟಾಲಜಿಸ್ಟ್ ಡಾ. ಭವ್ಯ.

ಮನೆಯಲ್ಲಿ ನವಜಾತ ಶಿಶು ಆರೈಕೆ ಹೇಗೆ?
– ಮಗುವಿನ ದೇಹವನ್ನ, ಕಂಪ್ಲೀಟಾಗಿ ಕವರ್ ಮಾಡುವ ರೀತಿ ಬಟ್ಟೆ ಹಾಕಿ
– ಮಗುವಿಗೆ ಹಾಕುವ ಬಟ್ಟೆ, ಮಗುವನ್ನು ಹೊರಗಿನ ಚಳಿಯಿಂದ ತಡೆಯುವಂತಿರಬೇಕು
– ಮಗುವಿಗೆ ಕುಡಿಸುವ ನೀರು, ಕುದಿಸಿ ಆರಿಸಿದ ನೀರಾಗಿರಬೇಕು
– ಯಾವುದೇ ಕಾರಣಕ್ಕೂ, ಮಗುವಿಗೆ ಹೊರಗಿನ ಆಹಾರವನ್ನ ಕೊಡ್ಲೇಬಾರದು
– ಅತ್ಯವಶ್ಯಕವಾಗಿ, ತಾಯಿಯ ಎದೆ ಹಾಲನ್ನೇ ಕುಡಿಸಬೇಕು
– ಮಗುವನ್ನು ಸೊಳ್ಳೆ ಕಚ್ಚುವುದರಿಂದ ದೂರವಿಡಲು, ಮಸ್ಕಿಟೋ ನೆಟ್ಸ್ ತಪ್ಪದೇ ಉಪಯೋಗಿಸಿ
– ಮಳೆಗಾಲದಲ್ಲಿ ಜ್ವರ ನೆಗಡಿಯಾಗುವ ಸಾಧ್ಯತೆ ಇರುತ್ತದೆ. ಇದನ್ನ ಅರಿಯಲು ನಿಮ್ಮ ಕೈ ಹಿಂಬದಿಯಿಂದ ಮಗುವಿನ ಪಾದ ಮತ್ತು ಹೊಟ್ಟೆಯನ್ನ ಮುಟ್ಟಿ ನೋಡಿ, ಆಗ ನಿಮ್ಮ ದೇಹದ ಉಷ್ಣಾಂಶಕ್ಕೆ ಮಗುವಿನ ಉಷ್ಣಾಂಶ ಸರಿಯಾಗಿರಬೇಕು.
– ಮಗುವಿನ ದೇಹ ತಣ್ಣಗಿದ್ದರೆ ತಾಯಿಯೇ ಅದನ್ನು ಬೆಚ್ಚಗೆ ಮಾಡಲು ತನ್ನ ಮಡಿಲಲ್ಲಿಟ್ಟುಕೊಳ್ಳಬೇಕು. ಅಂದರೆ ಮಗುವಿನ ಬಟ್ಟೆಯನ್ನ ಪೂರ್ತಿಯಾಗಿ ಬಿಚ್ಚಿ ತಾಯಿಯ ಎದೆಯ ಭಾಗದಲ್ಲಿ ಮಲಗಿಸಿಕೊಳ್ಳಬೇಕು. ಇದರಿಂದ ತಾಯಿಯ ಮತ್ತು ಮಗುವಿನ ದೇಹದ ಉಷ್ಣಾಂಶ ಸಮಪ್ರಮಾಣದಲ್ಲಿ ಪರಸ್ಪರ ಹರಿಯುತ್ತದೆ. ಇದರಿಂದ ಮಗು ಮತ್ತು ತಾಯಿಯ ನಡುವಿನ ಬಾಂಧವ್ಯವೂ ಸಹಜವಾಗಿಯೇ ಹೆಚ್ಚಾಗುತ್ತದೆ, ಅಲ್ವೇ!?
– ಮಳೆಗಾಲದ ರೋಗಗಳ ವಿರುದ್ಧ ಹಾಕುವ ಚುಚ್ಚು ಮದ್ದುಗಳನ್ನ ತಪ್ಪದೆ ಹಾಕಿಸಿ
– ವೈದ್ಯರು ಸಲಹೆ ಮಾಡಿರುವ ಎಮರ್ಜೆನ್ಸಿ ಮೆಡಿಸನ್​ ಅನ್ನ ಮನೆಯಲ್ಲಿ ಇಟ್ಕೊಂಡಿರಿ
– ಮಗುವನ್ನು ಮಲಗಿಸುವ ಅಥವಾ ಮಗು ಇರುವ ಜಾಗವನ್ನ ಕ್ರಿಮಿ, ಕೀಟಗಳಿಂದ ಮುಕ್ತವಾಗಿಸಿ.
– ಮಗುವಿನ ಸ್ವಚ್ಛತೆಯನ್ನ ಕಾಪಾಡಿ
– ಮಗುವನ್ನ ಬೆಚ್ಚಗಿರಿಸಲು ಸೂಕ್ತ ಬಟ್ಟೆಯಿಂದ ಕಿವಿ, ಕೈ ಕಾಲುಗಳನ್ನ ಕವರ್ ಮಾಡಿ
– ಒಟ್ಟಾರೆ ಮಕ್ಕಳಿರುವ ಮನೆಯನ್ನ ಸಾಂಕ್ರಾಮಿಕ ರೋಗ ಹರಡುವ ಸೂಕ್ಷ್ಮಜೀವಿಗಳಿಂದ ದೂರವಿರಿಸಿ

ಪವಿತ್ರ, ಫಸ್ಟ್ ನ್ಯೂಸ್

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv