ಯುವಕನ ಮೃತದೇಹ ಹುಡುಕಲು ಎನ್‍ಡಿಆರ್​ಎಫ್ ಟೀಂ ಆಗಮನ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರೋ ಮಳೆಗೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೃತದೇಹವನ್ನ ಹುಡುಕಲು 30 ಜನರ ಎನ್.ಡಿ.ಆರ್.ಎಫ್ ತಂಡ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿಗೆ ಆಗಮಿಸಿದೆ.

ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದ 24 ವರ್ಷದ ಅಶೋಕ್ ಸೇತುವೆ ಮೇಲೆ ಸಂಚರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಶಂಕಿಸಲಾಗಿತ್ತು. ಬೈಕ್​ನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುವಾಗ ಅಶೋಕ್ ಎಂಬ ಯುವಕ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆಂದು ನಿನ್ನೆ ಆತನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಆದ್ರೆ, ಮೃತದೇಹ ಪತ್ತೆಯಾಗಿರಲಿಲ್ಲ. ಅಶೋಕ್ ಸಂಚರಿಸುತ್ತಿದ್ದ ಬೈಕ್ ಹಳ್ಳಿದಿಂದ 50 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಹಾಗೂ ಪೊಲೀಸರು ಬೈಕ್‍ನ ಹಗ್ಗ ಕಟ್ಟಿ ನದಿಯಿಂದ ಎಳೆದಿದ್ರು. ಜೆಸಿಬಿ ಬಳಸಿ ಇಡೀ ದಿನ ಕಾರ್ಯಾಚರಣೆ ನಡೆಸಿದ್ರು ಕೂಡ ಅಶೋಕ್ ಮೃತದೇಹ ಪತ್ತೆಯಾಗಿರಲಿಲ್ಲ. ಆದ್ದರಿಂದ ಇಂದು ಎನ್.ಡಿ.ಆರ್.ಎಫ್ ತಂಡ ಮೃತದೇಹದ ಪತ್ತೆಗಾಗಿ ಆಗಮಿಸಿದೆ. ಆದ್ರೆ, ಸೋನೆ ಮಳೆ ಕೂಡ ಕಾರ್ಯಚರಣೆ ಅಡ್ಡಿಯುಂಟು ಮಾಡ್ತಿದೆ. ಮೃತ ಅಶೋಕ್‍ನನ್ನ ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದವನೆಂದು ಗುರುತಿಸಲಾಗಿದ್ದು, ಮೃತದೇಹಕ್ಕಾಗಿ ಇಂದೂ ಶೋಧ ಕಾರ್ಯ ಮುಂದುವರೆದಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv