ಮೃತದೇಹ ಪತ್ತೆ ಹಚ್ಚಲಿಲ್ಲ ಎನ್‌ಡಿಆರ್‌ಎಫ್‌: ಪ್ರಾಣ ಪಣಕ್ಕಿಟ್ಟು ಸಾಹಸ ಮೆರೆದ!

ಚಿಕ್ಕಮಗಳೂರು: ಸೆಲ್ಫಿ ಕ್ರೇಜ್​ಗೆ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹವನ್ನು ಹುಡುಕಲು ಎನ್‌ಡಿಆರ್‌ಎಫ್‌ ತಂಡಕ್ಕೆನೇ ಸಾಧ್ಯವಾಗಿರಲಿಲ್ಲ. ಆದ್ರೆ, ಈ ನುರಿತ ತಂಡವೇ ನಾಚುವಂತೆ ಸ್ಥಳೀಯ ಯುವಕನೊರ್ವ ಏಕಾಂಗಿಯಾಗಿ ಮೃತದೇಹ ಪತ್ತೆ ಮಾಡಿ ಜನರಿಂದ ಪ್ರಶಂಸೆ ಪಡೆದಿದ್ದಾನೆ.

ಕಳೆದ 1 ತಿಂಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಈ ಪ್ರವಾಹಕ್ಕೆ ಹಲವರು ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹ ಪತ್ತೆಗೆ ಎನ್‌ಡಿಆರ್‌ಎಫ್‌ ತಂಡ ಜಿಲ್ಲೆಗೆ ಆಗಮಿಸಿತ್ತು. ಮೃತದೇಹಗಳನ್ನ ಹುಡುಕಲು ನುರಿತ ತಂಡ ಹಲವು ಬಾರಿ ಪ್ರಯತ್ನ ಪಟ್ಟಿತ್ತು. ಆದ್ರೆ, ಎನ್‌ಡಿಆರ್‌ಎಫ್‌ ತಂಡಕ್ಕೆ ಮೃತದೇಹಗಳನ್ನ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ ಯುವಕ ಭಾಸ್ಕರ್‌, ಏಕಾಂಗಿಯಾಗಿ ಕಾರ್ಯಾಚರಣೆ ನಡೆಸಿ ಮೂರು ಮೃತದೇಹಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ.

16 ದಿನಗಳ ಹಿಂದೆ ಮಂಗಳೂರು ಮೂಲದ ತಿರಣ್ ಕೋಟ್ಯಾನ್ ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಈತನ ಮೃತದೇಹ ಹುಡುಕಲು ಕೂಡ ಎನ್​ಡಿಆರ್​ಎಫ್ ತಂಡ ವಿಫಲವಾಗಿತ್ತು. ಆದ್ರೆ ನಿನ್ನೆ ಭಾಸ್ಕರ್ ಉಕ್ಕಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದ್ದಾನೆ. ಅಲ್ಲದೇ ರಭಸವಾಗಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಏಕಾ‌ಂಕಿಯಾಗಿ ಮೃತದೇಹವನ್ನು ಎಳೆದುಕೊಂಡು ಬರುತ್ತಿರುವ ದೃಶ್ಯ ಫಸ್ಟ್ ನ್ಯೂಸ್​ಗೆ ಲಭ್ಯವಾಗಿದೆ. ಇದೊಂದೇ ಪ್ರಕರಣವಲ್ಲ, ಕಳೆದ ತಿಂಗಳು ಕೊಪ್ಪ ತಾಲೂಕಿನ ಬಸ್ತಿಹಳ್ಳದಲ್ಲಿ ಯುವಕನೊರ್ವ ಕೊಚ್ಚಿಹೋಗಿದ್ದ. ಆಗಲೂ ಕೂಡ ಎನ್‌ಡಿಆರ್‌ಎಫ್‌ ಆತನ ಮೃತದೇಹ ಪತ್ತೆ ಹಚ್ಚಲು ವಿಫಲವಾಗಿತ್ತು. ಆದ್ರೆ, ಸಾಹಸಿ ಯುವಕ ಭಾಸ್ಕರ್‌ ಮೃತದೇಹವನ್ನ ಪತ್ತೆ ಮಾಡಿದ. ಸದ್ಯ ಮಲೆನಾಡಿನಲ್ಲಿ ಭಾಸ್ಕರ್ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾನೆ. ಎನ್‌ಡಿ ಆರ್‌ಎಫ್‌ ತಂಡವೇ ನಾಚುವಂತೆ ಸಾಹಸ ಮೆರೆದಿದ್ದಾನೆ.