ಎನ್​.ಡಿ. ತಿವಾರಿ ಪುತ್ರ ರೋಹಿತ್ ನಿಗೂಢ ಸಾವು ಪ್ರಕರಣ: ಪತ್ನಿ ಅರೆಸ್ಟ್..!

ನವದೆಹಲಿ: ಮಾಜಿ ಮುಖ್ಯಮಂತ್ರಿ ಎನ್​ ಡಿ ತಿವಾರಿ ಅವರ ಪುತ್ರ ರೋಹಿತ್​​ ಶೇಖರ್​​ ತಿವಾರಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದ ಆರೋಪದ ಮೇಲೆ ಹಂತಕಿಯನ್ನ ದಿಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧನಕ್ಕೀಡಾದ ಹಂತಕಿ, ಸ್ವತಃ ರೋಹಿತ್​​ ಶೇಖರ್​ ಪತ್ನಿ ಅಪೂರ್ವ ಶುಕ್ಲಾ ತಿವಾರಿ. ಅಪೂರ್ವಗೆ ರೋಹಿತ್​​ ಶೇಖರ್ ಜೊತೆಗಿನ ಮದುವೆ ಇಷ್ಟವಿರಲಿಲ್ಲವಂತೆ. ಹಾಗಾಗಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದು ಮಲಗಿದ್ದ ಪತಿ ರೋಹಿತ್​​ ಶೇಖರ್​ನನ್ನು ತಾನೇ ಮುಖಕ್ಕೆ ದಿಂಬು ಹಾಕಿ, ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಆರೋಪಿ ಅಪೂರ್ವ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.
ಸತತವಾಗಿ ಮೂರು ದಿನಗಳಿಂದ ಅಪೂರ್ವ ವಿಚಾರಣೆ ನಡೆದಿತ್ತು. ಸಾಂದರ್ಭಿಕ ಸಾಕ್ಷ್ಯಗಳ ಅನುಸಾರ ನಮಗೆ ಅಪೂರ್ವ, ಕೊಲೆಗಾತಿ ಎಂಬ ಅನುಮಾನವಿತ್ತು. ಇಂದು ತೀವ್ರ ವಿಚಾರಣೆಯ ಬಳಿಕ ಆಕೆ ಒಪ್ಪಿಕೊಂಡಿದ್ದಾಗಿ ಕ್ರೈಂ ಬ್ರ್ಯಾಂಚ್​ ಪೊಲೀಸರು ಹೇಳಿದ್ದಾರೆ.
ಪುತ್ರನ ಸಾವಿನ ಸಂದರ್ಭದಲ್ಲಿ ರೋಹಿತ್​​ ಶೇಖರ್ ತಾಯಿ ಉಜ್ವಲಾ ಅವರು ಸೊಸೆ ಮತ್ತು ಆಕೆಯ ತವರು ಮನೆಯ ಮೇಲೆ ತೀವ್ರ ಕಿಡಿಕಾರಿ, ಅವರು ತಮ್ಮ ಪುತ್ರನ ಆಸ್ತಿಯ ಮೇಲೆ ಕಣ್ಣಿಟ್ಟಿದ್ದು ಈ ಕುಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದರು.