ನವೀನ್ ಕಡು ಹಿಂದುತ್ವವಾದಿ ಅಲ್ಲಾ.! ಗುಜರಾತ್ ಫೊರೆನ್ಸಿಕ್ ತಜ್ಞರ ಸ್ಪಷ್ಟನೆ..!

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನವೀನ್ ಹಿಂದೂತ್ವವಾದಿ ಅಲ್ಲಾ ಎಂದು ಗುಜರಾತ್​ನ ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿದೆ. ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್​ಗೆ ಪತ್ರ ಬರೆದಿರುವ ಡೈರೆಕ್ಟರೇಟ್ ಆಫ್ ಪೊರೆನ್ಸಿಕ್ ಸೈನ್ಸ್ ಈ ವಿಚಾರವನ್ನು ಪತ್ರದಲ್ಲಿ ಉಲ್ಲೇಖಿಸಿದೆ. ನವೀನ್ ಮಂಪರು ಪರೀಕ್ಷೆಗೆಂದು ಎಸ್ಐಟಿ ಪೊಲೀಸರು ಗುಜರಾತ್​ಗೆ ನವೀನ್‌ನನ್ನು ಕರೆ ತಂದಿದ್ದರು. ಆದರೆ ಇಲ್ಲಿ ಬಂದ ಬಳಿಕ ಆತ ತಾನು ಮಂಪರು ಪರೀಕ್ಷೆಗೆ ಒಳಗಾಗುವುದಕ್ಕೆ ನಿರಾಕರಿಸಿದ್ದಕ್ಕೆ ವಿಧಿ ವಿಜ್ಞಾನ ತಜ್ಞರಿಂದ ಸಂದರ್ಶನ ನಡೆಸಿದ್ದೆವು. ಸಂದರ್ಶನದ ವೇಳೆ ಆತನಿಂದ ಅನೇಕ ಮಾಹಿತಿಗಳನ್ನ ಸಂಗ್ರಹಿಸಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೇ, ಈ ಎಲ್ಲಾ ಅಂಶಗಳಿರೋ ಪತ್ರವನ್ನು ಬಿ.ಕೆ. ಸಿಂಗ್​ ಅವರಿಗೆ ವೈಜ್ಞಾನಿಕ ಅಧಿಕಾರಿ ಎಸ್.ಆರ್.ಶಾ ಪತ್ರ ಬರೆದಿದ್ದಾರೆ. ಆ ಪತ್ರದ ಪ್ರತಿ ಫಸ್ಟ್ ನ್ಯೂಸ್​ಗೆ ಲಭ್ಯವಾಗಿದೆ.

ಗೌರಿ ಹತ್ಯೆಗೆ ನವೀನ್ ಅಲಿಯಾಸ್​ ಹೊಟ್ಟೆ ಮಂಜ ಗನ್ ಕೊಟ್ಟಿರಲಿಲ್ಲ!
ನವೀನ್ ಮತ್ತು ಪ್ರವೀಣ್ ಬೀರೂರಿನಲ್ಲಿ ಭೇಟಿಯಾಗಿ ಮಾತನಾಡಿದ್ದರು. ಸುಮ್ಮನೆ ಮಾತನಾಡುವಾಗ ನವೀನ್ ಬಳಿ ಪ್ರವೀಣ್ ಗನ್ ಕೇಳಿದ್ದ. ಆದರೆ ಇಲ್ಲಿ ತನಕ ಪ್ರವೀಣ್​ಗೆ ಯಾವುದೇ ಗನ್ ಅನ್ನು ನವೀನ್ ನೀಡಿಲ್ಲ. ಮೃತ ಗೌರಿ ಪತ್ರಕರ್ತೆಯೆಂದು ಆರೋಪಿ ನವೀನ್​ಗೆ ಗೊತ್ತಿದೆ. ಅವರ ಮೇಲಿನ ಕೂತೂಹಲಕ್ಕಾಗಿ ಅವರ ಬರಹಗಳನ್ನು ಓದಿದ್ದಾನೆ. ಅವರ ಹತ್ಯೆ ಬಳಿಕವೇ ಈ ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸೋಕೆ ಶುರು ಮಾಡಿದ್ದಾನೆ. ಅರೆಸ್ಟ್​ ಆದ ಬಳಿಕ ಆತನನ್ನು ಗೌರಿ ಲಂಕೇಶ್​ ಮನೆಗೆ ಎಸ್ಐಟಿ ಅಧಿಕಾರಿಗಳು ಕರೆದೊಯ್ದರು ಎಂದು ನವೀನ್ ಸಂದರ್ಶನದಲ್ಲಿ ಹೇಳಿದ್ದಾನೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪೊಲೀಸರು ತಮಗೆ ಇಷ್ಟವಾದ ರೀತಿ ತನಿಖೆ ಮಾಡುತ್ತಿದ್ದಾರೆ..!
ಪೊಲೀಸರ ಮೇಲೆ ನಂಬಿಕೆ ಇಲ್ಲದ ಕಾರಣ ಆತ ಗೌರಿ ಮನೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಪೊಲೀಸರು ತಮಗೆ ಇಷ್ಟವಾದ ರೀತಿ ತನಿಖೆ ಮಾಡುತ್ತಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ನವೀನ್ ಪದೇ ಪದೇ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾನೆ.
ಭಗವಾನ್ ಹತ್ಯೆ ಮಾಡಲು ನವೀನ್ ಯಾವುದೇ ಸಂಚು ರೂಪಿಸಿಲ್ಲ!
ಸಂಪೂರ್ಣ ಕರ್ನಾಟಕ ನೋಡುವುದೇ ನನ್ನ ಕೊನೆಯಾಸೆ ಎಂದು ನವೀನ್ ಹೇಳಿಕೊಂಡಿದ್ದಾನೆ. ಗೌರಿ ಲಂಕೇಶ್ ಹತ್ಯೆ ಬಗ್ಗೆ ಯಾರೊಬ್ಬರ ಎದುರು ಅಭಿಪ್ರಾಯ ಹಂಚಿಕೊಂಡಿಲ್ಲ. ಗೌರಿ ಸಾವಿನಿಂದ ಆತನಿಗೆ ಯಾವುದೇ ನೋವಾಗಲಿ ಖುಷಿಯಾಗಲಿ ಆ​ಗಿಲ್ಲ. ಆದರೆ ಯಾರು ಗೌರಿಯನ್ನು ಕೊಲೆ ಮಾಡಿರಬಹುದು ಎಂದು ಹೆಚ್ಚು ಯೋಚನೆ ಮಾಡುತ್ತಿದ್ದಾನೆ. ಪ್ರೊ.ಕೆ.ಎಸ್. ಭಗವಾನ್ ಯಾರು ಅಂತಾ ನವೀನ್​ಗೆ ಚೆನ್ನಾಗಿ ಗೊತ್ತಿದೆ. ಭಗವಾನ್​ರ ಯಾವುದೇ ಪುಸ್ತಕವನ್ನು ಆರೋಪಿ ನವೀನ್ ಇಲ್ಲಿ ತನಕ ಓದಿಲ್ಲ. ಭಗವಾನ್ ಹತ್ಯೆ ಮಾಡಲು ನವೀನ್ ಯಾವುದೇ ಸಂಚು ರೂಪಿಸಿಲ್ಲ. ನವೀನ್ ಯಾವುದೇ ಕಾರಣಕ್ಕೂ ಟೈಂ ವಸ್ಟ್ ಮಾಡಲ್ಲ. ಕಡು ಹಿಂದೂತ್ವವಾದಿಯೂ ಅಲ್ಲ. ಹಿಂದೂ ಬಗ್ಗೆ ಸ್ವಲ್ಪ ಓದಿಕೊಂಡಿದ್ದಾನಷ್ಟೇ. ನವೀನ್​ಗೆ ಪ್ರವೀಣ್ ಯಾರು ಅಂತಾ ಚೆನ್ನಾಗಿ ಗೊತ್ತು. ಪ್ರವೀಣ್ ಯಾರು ಅಂತಾ ಆತ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ. ಮಂಡ್ಯದ ಸಂಭಾಜಿ ಸೇತುವೆಯ ಬಳಿ ಮೊದಲ ಬಾರಿ ಪ್ರವೀಣ್ ನನ್ನ ಭೇಟಿಯಾಗಿದ್ದ. ಆತನನ್ನ ನವೀನ್​ ತನ್ನ ಬೀರೂರಿನ ಮನೆಗೂ ಸಹ ಕರೆಸಿಕೊಂಡಿದ್ದ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಫೊರೆನ್ಸಿಕ್ ಸೈನ್ಸ್‌ ತಜ್ಞರ ಈ ಪತ್ರದ ನವೀನ್​ ಹೇಳಿಕೆಯಿಂದ ಎಸ್‌ಐಟಿ ಅಧಿಕಾರಿಗಳನ್ನು ಸಂಶಯದ ಕಣ್ಣುಗಳಿಂದ ನೋಡುವಂತಾಗಿದೆ. ಯಾಕಂದ್ರೆ, ಎಸ್ಐಟಿ ಈಗಾಗಲೇ ಕೋರ್ಟ್​ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ನವೀನ್ ಹೇಳಿಕೆಯನ್ನು ದಾಖಲಿಸಿದೆ. ಆದರೆ ಎಸ್​ಐಟಿಯ ಚಾಜ್​ಶೀಟ್​ನಲ್ಲಿರುವ ನವೀನ್​ ಹೇಳಿಕೆಗೂ ಫೊರೆನ್ಸಿಕ್ ಸೈನ್ಸ್‌ ತಜ್ಞರ ಪತ್ರದಲ್ಲಿ ಉಲ್ಲೇಖವಾಗಿರುವ ನವೀನ್‌ ಹೇಳಿಕೆಗೂ ವ್ಯತ್ಯಾಸವಿದೆ. ಚಾರ್ಜ್‌ಶೀಟ್‌ನಲ್ಲಿ ಭಗವಾನ್ ಹತ್ಯೆಗೆ ನವೀನ್​ ಸಂಚು ರೂಪಿಸಿದ್ದ. ಅದಕ್ಕಾಗಿ ಗನ್ ಖರೀದಿ ಮಾಡಲು ತಿಳಿಸಿದ್ದ ಅನ್ನೋದು ಉಲ್ಲೇಖವಿದೆ. ಆದ್ರೆ, ಪೊರೆನ್ಸಿಕ್‌ ಪತ್ರದಲ್ಲಿ ಸಂಚು ರೂಪಿಸಿಲ್ಲ ಅಂತಿದೆ. ಹಾಗಾದರೆ ಚಾರ್ಜ್‌ಶೀಟ್‌ಗೆ ಎಸ್​ಐಟಿ ಅಧಿಕಾರಿಗಳು ಬಲವಂತವಾಗಿ ನವೀನ್​ನಿಂದ ಸಹಿ ಮಾಡಿಸಿಕೊಂಡರಾ..? ಅನ್ನೋ ಪ್ರಶ್ನೆ ಈಗ ಎದುರಾಗಿದೆ. ಅಲ್ಲದೇ ನವೀನ್ ಏನಾದ್ರೂ ಪೊಲೀಸರ ಮತ್ತು ಲ್ಯಾಬ್ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾನಾ ಅನ್ನೋದನ್ನೂ ತಳ್ಳಿ ಹಾಕುವಂತಿಲ್ಲ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv