ಪ್ರಧಾನಿ ಮೋದಿ ದೇಶಕ್ಕೆ ಮಾಣಿಕ್ಯ ರೂಪದ, ಅಪರೂಪದ ವ್ಯಕ್ತಿ -ನಿರ್ಮಲಾ ಸೀತಾರಾಮನ್

ಶಿವಮೊಗ್ಗ: ಯಾವುದೇ ದೇಶವಾದರೂ ಅದಕ್ಕೆ ಮಾಣಿಕ್ಯ ರೂಪದ ವ್ಯಕ್ತಿಗಳು ಪದೇ ಪದೇ ಸಿಗುವುದಿಲ್ಲ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಮಹಿಳಾ ಸಮಾವೇಶ ಮತ್ತು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಮಾಣಿಕ್ಯವಾಗಿರುವ ಮೋದಿ ಅವರು ದೇಶಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮನ್ನು ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ಪ್ರಧಾನಿ ಮಾಡುತ್ತಿರುವ ಪ್ರತಿಯೊಂದು ಕೆಲಸ ದೇಶದ ಗೌರವ ಹೆಚ್ಚಿಸುವಂತಹುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

‘ಬೇಳೆ, ಕಾಳುಗಳ ದ್ವಿಗುಣ ಉತ್ಪಾದನೆಗೆ ಒತ್ತು ನೀಡಲಾಗಿದೆ’
2014ರಲ್ಲಿ ಲೋಕಸಭೆ ಚುನಾವಣೆ ನಡೆದಾಗ ದೇಶದ ಪರಿಸ್ಥಿತಿ ಏನಿತ್ತು. ನಂತರದಲ್ಲಿ ಏನಾಗಿದೆ? ಎಂಬುದರ ಬಗ್ಗೆ ನಿಮಗೆ ಗೊತ್ತಿದೆ. 2014ರಲ್ಲಿ ಪ್ರತಿಯೊಂದು ಬೇಳೆ, ಕಾಳುಗಳ ಬೆಲೆ ಗಗನಕ್ಕೇರಿತ್ತು. ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಮಹತ್ವದ್ದಾದ ಬೇಳೆಗಳ ಖರೀದಿ ಬಡವರಿಗೆ ಸಾಧ್ಯವಾಗುತ್ತಿರಲಿಲ್ಲ. ಬೇಳೆ ಕಾಳುಗಳ ಕೊರತೆ ದೇಶಕ್ಕೆ ಹೊಸತೇನಲ್ಲ. ಅಗತ್ಯವಿದ್ದಷ್ಟು ಬೇಳೆ ನಮ್ಮಲ್ಲಿ ಉತ್ಪಾದನೆ ಆಗುತ್ತಿರಲಿಲ್ಲ‌. ಹಾಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬೇಳೆ, ಕಾಳುಗಳ ದ್ವಿಗುಣ ಉತ್ಪಾದನೆಗೆ ಒತ್ತು ನೀಡಲಾಯಿತು. ಇದು ಮೋದಿ ಅವರ ದೂರದೃಷ್ಟಿಯಿಂದ ಸಾಧ್ಯವಾಯಿತು. ಮಹಾತ್ಮ ಗಾಂಧಿ 150ನೇ ಜಯಂತಿ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ ನಾವು ದೇಶವನ್ನು ಬಯಲು ಶೌಚಾಲಯ ಮುಕ್ತವಾಗಿಸಲು ನಿರ್ಧರಿಸಿದ್ದಾರೆ. ಅದೇ ರೀತಿ ಪ್ರತಿಯೊಬ್ಬರಿಗೂ ವಸತಿ ಸೌಲಭ್ಯ ಸಿಗಬೇಕು ಮತ್ತು ದೇಶದ ರೈತರ ಆದಾಯ ದ್ವಿಗುಣವಾಗಬೇಕು ಎಂಬ ದೂರದೃಷ್ಟಿಯಿಂದ ಮೋದಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಭಾರತ ಅಭಿವೃದ್ಧಿಶೀಲ ರಾಷ್ಟ್ರದ ಬದಲು ಅಭಿವೃದ್ದಿ ಹೊಂದಿದೆ ದೇಶವಾಗಬೇಕು ಎಂದು ನಿರ್ಧರಿಸಿ ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ ಎಂದರು.

‘ಸೈನ್ಯದಲ್ಲೂ ಮಹಿಳೆಯರಿಗೂ ಅವಕಾಶ ನೀಡಲಾಗಿದೆ’
ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದ್ದು, ಇದೀಗ ಚುನಾವಣೆ ಸಮಯದಲ್ಲಿ ನ್ಯಾಯ್ ಹೆಸರಿನಲ್ಲಿ ಬಡತನ ನಿರ್ಮೂಲನೆ ಹೆಸರಿನಲ್ಲಿ ಇದನ್ನು ಜಾರಿಗೊಳಿಸಲು ಮುಂದಾಗಿದೆ. ಹಾಗಾದರೆ 1971 ರಿಂದಲೂ ನಿಮ್ಮ ಅಜ್ಜಿಯೇ ಅಧಿಕಾರದಲ್ಲಿ ಇದ್ದರಲ್ಲ. ಹಾಗಾದರೆ ದೇಶದ ಬಡತನ ಏಕೆ ನಿವಾರಣೆಯಾಗಲಿಲ್ಲ. ಮುದ್ರಾ ಯೋಜನೆ ಜಾರಿಯಿಂದ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುವಂತಾಗಿದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲು ಕಲ್ಪಿಸಲಾಗಿದೆ. ಸೈನ್ಯದಲ್ಲೂ ಮಹಿಳೆಯರಿಗೂ ಅವಕಾಶ ನೀಡಲಾಗಿದೆ. ಈ ತನಕ ಪಾಕಿಸ್ತಾನದ ಜೊತೆಗೆ 4 ಯುದ್ಧ ನಡೆದು ಭಾರತ ಗೆದ್ದಿದ್ದರೂ, ಪಾಕಿಸ್ತಾನ ತನ್ನ ಬುದ್ಧಿ ಕಲಿತಿಲ್ಲ. ಈಗಲೂ ಭಾರತದ ಗಡಿಯೊಳಗೆ ಭಯೋತ್ಪಾದಕರನ್ನು ನುಗ್ಗಿಸುತ್ತಿದೆ. ಈ ಹಿಂದಿನ ಯುಪಿಎ ಸರ್ಕಾರ ಈ ನಿಟ್ಟಿನಲ್ಲಿ ಆಗ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಆದರೆ 2016 ರ ಉರಿ ಮತ್ತು ಪುಲ್ವಾಮಾ ದಾಳಿ ನಂತರ ನಮ್ಮ ಸರ್ಕಾರ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರದ ಮೇಲೆ ಪ್ರತಿ ದಾಳಿ ನಡೆಸಿತು.
ಇದನ್ನು ಪಾಕಿಸ್ತಾನ ಸಹ ಒಪ್ಪಿಕೊಂಡಿತು. ಆದರೆ ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವಾಸಾರ್ಹ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ನಾವು ನಮ್ಮ ಸೈನಿಕರನ್ನು ಅಲ್ಲಿಗೆ ನುಗ್ಗಿಸಿ ಬೇಕಾಯಿತು. ಇದಕ್ಕೆ ವಿಶ್ವದ ಎಲ್ಲಾ ದೇಶಗಳು ಭಾರತವನ್ನು ಬೆಂಬಲಿಸಿದ್ದವು ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv