ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು..!

ಸಾಂಸ್ಕೃತಿಕ ನಗರಿ ಮೈಸೂರಿಗೆ ಹೋದ್ಮೇಲೆ ತಾಯಿ ಚಾಮುಂಡಿ ದರ್ಶನ ಮಾಡ್ಲೇಬೇಕು. ಹಾಗೇಯೇ ಚಾಮುಂಡಿ ಬೆಟ್ಟ ಏರುವಾಗ ಕಾಣುವ ಬೃಹತ್ ನಂದಿಯನ್ನು ಕಣ್ತುಂಬಿಕೊಳ್ಳದೇ ಇದ್ರೆ ಹೇಗೆ. ದೇಶದಲ್ಲೇ ಅತಿ ವಿಶಿಷ್ಟ ಮತ್ತು ಎತ್ತರದ ನಂದಿ ಪ್ರತಿಮೆಗಳಲ್ಲಿ ಮೈಸೂರಿನಲ್ಲಿರುವ ನಂದಿ ಮೂರನೇ ದೊಡ್ಡ ನಂದಿಯಾಗಿದೆ. ಆದ್ರೆ, ಇದೀಗ ಈ ನಂದಿಗೆ ಕಂಟಕ ಎದುರಾಗಿದೆ. ಬೃಹತ್ ನಂದಿ ಪ್ರತಿಮೆಯ ಬಲಭಾಗದಲ್ಲಿ ಬಿರುಕು ಉಂಟಾಗಿದೆ.

ಬಿರುಕು ಬಿಟ್ಟಿದೆ ಐತಿಹಾಸಿಕ ನಂದಿ ವಿಗ್ರಹ
ಐತಿಹಾಸಿಕ ನಂದಿ ಪ್ರತಿಮೆಯ ಬಲ ಭಾಗದಲ್ಲಿ ಬಿರುಕುಂಟಾಗಿದೆ. ನಂದಿಯ ಬಲಗಾಲಿನ ಮೇಲೆ ಸುಮಾರು ಮೂರು ಅಡಿಯಷ್ಟು ಪ್ರತಿಮೆಯಲ್ಲಿ ಬಿರುಕು ಮೂಡಿದ್ದು, ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ ಇದರ ಬಗ್ಗೆ ಗಮನಹರಿಸಿದಂತಿಲ್ಲ. ಆದ್ರೆ ಬಿರುಕು ಮೂಡಲು ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. 350 ವರ್ಷಗಳ ಇತಿಹಾಸವೊಂದಿರುವ ವಿಗ್ರಹ ಮೂಲ ಬಣ್ಣ ಬಿಳಿಯಾಗಿದ್ದು, ಇದಕ್ಕೂ ಮುನ್ನ ಎಣ್ಣೆ ಮಜ್ಜನ ಮಾಡಿ ಮೂಲ ಬಣ್ಣವನ್ನು ಕಳೆದುಕೊಂಡು ಕಪ್ಪಾಗಿತ್ತು. ಹಿಂದಿನ ವರ್ಷ ನಂದಿಗೆ ಧಾರ್ಮಿಕ ದತ್ತಿ ಇಲಾಖೆಯವರು ರಾಸಾಯನಿಕ ಬಳಸಿ ವಿಗ್ರಹವನ್ನು ಸ್ವಚ್ಛಗೊಳಿಸಿದ್ದರು. ಹಾಗಂತ ಇದರಿಂದಲೇ ಬಿರುಕು ಉಂಟಾಗಿದೆ ಅನ್ನೋದು ಕೂಡ ಸ್ಪಷ್ಟವಾಗಿಲ್ಲ.

ನಂದಿ ಪ್ರತಿಮೆಯ ವೈಶಿಷ್ಟತೆ ಏನು..?
ಚಾಮುಂಡಿ ಬೆಟ್ಟ ಹತ್ತುವಾಗ ಒಂದು ಸಾವಿರ ಮೆಟ್ಟಿಲುಗಳನ್ನು ಏರಿ ಸಾಗಬೇಕು. ಇದರಲ್ಲಿ ಅರ್ಧ ದಾರಿ ಕ್ರಮಿಸಿದ ಮಾರ್ಗ ಮಧ್ಯದಲ್ಲಿ ನಂದಿ ಪ್ರತಿಮೆಗೆ ಕಾಣ ಸಿಗುತ್ತದೆ. ಏಕಶಿಲೆಯಲ್ಲಿ ಕೆತ್ತನೆ ಮಾಡಿದ ಮಹಾನಂದಿ ಪ್ರತಿಮೆ ಇದಾಗಿದೆ. ಈ ನಂದಿ 14 ಅಡಿ ಎತ್ತರವಿದೆ. 4 ಅಡಿ ಅಗಲದ ಜಗತಿಯ ಮೇಲೆ ನಂದಿ ಪ್ರತಿಮೆ ಇದೆ. ಇನ್ನು ಈ ನಂದಿಯನ್ನು ಅಲ್ಲೇ ಇರುವ ಕಲ್ಲಿನಲ್ಲೇ ಕೆತ್ತನೆ ಮಾಡಿರುವುದು, ಸೂಕ್ಷ್ಮವಾದ ಕೆತ್ತನೆ ನಂದಿಯ ವಿಶೇಷ. ನಂದಿಯ ವಿಶೇಷತೆ ಎಂದ್ರೆ ಎಡಗಾಲನ್ನು ಎದ್ದೇಳುವ ಭಂಗಿಯಲ್ಲಿ ಮಡಿಚಿಕೊಂಡಿದೆ. ಬಲಗಾಲು ಸಂಪೂರ್ಣ ಮಡಿಚಿಕೊಂಡಿರುವ ಭಂಗಿಯಲ್ಲಿ ಕೆತ್ತನೆ ಮಾಡಲಾಗಿದೆ.

ಭಾರತದಲ್ಲಿ ಮೂರನೇ ದೊಡ್ಡ ನಂದಿ
ಮೈಸೂರಿನಲ್ಲಿರುವ ನಂದಿ ಭಾರತದಲ್ಲೇ ಮೂರನೇ ಅತಿ ದೊಡ್ಡ ನಂದಿಯಾಗಿದೆ. ಮೊದಲನೇ ನಂದಿ ಇರೋದು ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿ. ತಂಜಾವೂರಿನ ಚೋಳರ ಕಾಲದಲ್ಲಿ ಈ ನಂದಿಯನ್ನು ನಿರ್ಮಾಣ ಮಾಡಲಾಗಿದೆ. ಈ ನಂದಿ ವಟ್ರೇ ಕಾಲು ನಂದಿ ಅಂದರೆ ಒಂದು ಕಾಲಿನ ನಂದಿ ಎನ್ನಲಾಗುತ್ತದೆ. ಆದ್ರೆ, ಅದು ಯಾವುದೋ ಕಾರಣಕ್ಕೆ ಭಿನ್ನವಾಗಿರೋದ್ರಿಂದ ಅದನ್ನು ತೆಗೆದಿಟ್ಟು ಮತ್ತೊಂದು ನಂದಿಯನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಎರಡನೇ ದೊಡ್ಡ ನಂದಿ ಆಂಧ್ರ ಪ್ರದೇಶದ ಲೇಪಾಕ್ಷಿಯಲ್ಲಿದೆ. ವಿಜಯನಗರ ಸಾಮ್ರಾಜ್ಯದ ಅರಸರು ನಿರ್ಮಿಸಿರುವ ನಂದಿ ಇದಾಗಿದೆ. ಇದು ಮೈಸೂರಿನ ನಂದಿಗಿಂತ ಸ್ವಲ್ಪ ಎತ್ತರವಾಗಿದೆ.

ಇಷ್ಟೆಲ್ಲಾ ವಿಶೇಷತೆಗಳನ್ನ ಹೊಂದಿರೋ ಮೈಸೂರಿನ ನಂದಿ ವಿಗ್ರಹದಲ್ಲೀಗ ಬಿರುಕು ಮೂಡಿರೋದು ಕಳವಳ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಈ ವಿಗ್ರಹದ ಬಿರುಕಿಗೆ ಕಾರಣ ಪತ್ತೆ ಮಾಡಿಲ್ಲ. ಯಾಕೆ ಹೀಗಾಯಿತು ಅಂತಾ ತಿಳಿಯೋ ಕ್ರಮಕ್ಕೂ ಮುಂದಾಗಿಲ್ಲ. ಹೀಗಾಗಿ ಸದ್ಯ ಮೂಡಿರೋ ಬಿರುಕು ಕೂಡಾ ಮುಂದಿನ ದಿನಗಳಲ್ಲಿ ದೊಡ್ಡದಾಗುತ್ತಾ ಹೋಗೋ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv