ಹ್ಯಾರಿಸ್ ಪುತ್ರ ನಲಪಾಡ್​ಗೆ ಕೊನೆಗೂ ಸಿಕ್ತು ಜಾಮೀನು​..!

ಬೆಂಗಳೂರು: ವಿದ್ವತ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮಹಮದ್ ನಲಪಾಡ್​ಗೆ ಕೊನೆಗೂ ಜಾಮೀನು ಸಿಕ್ಕಿದೆ. 115 ದಿನಗಳ ಕಾಲ ಜೈಲು ಹಕ್ಕಿಯಾಗಿದ್ದ ಶಾಸಕ ಹ್ಯಾರಿಸ್​ ಪುತ್ರ ನಲಪಾಡ್​ಗೆ ಇಂದು ಹೈಕೋರ್ಟ್​ ಜಾಮೀನು ನೀಡಿದೆ.

ನಿನ್ನೆ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಹೈಕೋರ್ಟ್‌, ಇಂದಿಗೆ ತೀರ್ಪುನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಙ, ನಿನ್ನೆ ವಾದ-ಪ್ರತಿವಾದ ಆಲಿಸಿದ್ದು, ನಲಪಾಡ್​ಗೆ ಜಾಮೀನು ಕೊಡೋಣ ಬಿಡಿ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಾಮ್‌ ಸುಂದರ್‌ಗೆ ಹೇಳಿದ್ದರು. ಅಲ್ಲದೇ, ಯಾಕೆ ಕೊಡಬಾರದು ಅಂತಾ ಹಠ ಹಿಡಿದಿದ್ದೀರಾ. ತಂದೆ ಶಾಸಕರಾದರೇ ಮಗನಿಗೆ ಪ್ರಭಾವ ಇದೆ ಅಂತಾ ಹೇಗೆ ಹೇಳುತ್ತೀರಾ ಅಂತಾ ಹಲವು ಪ್ರಶ್ನೆಗಳನ್ನೂ ಕೇಳಿದ್ದರು. ಇನ್ನೂ, ನಲಪಾಡ್‌ ಪರ ವಕೀಲರಾದ ಬಿ.ವಿ.ಆಚಾರ್ಯ, ಮಾರಕಾಸ್ತ್ರಗಳಿಂದ ವಿದ್ವತ್‌ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖ ಮಾಡಿಲ್ಲ. ಇದು ಕೊಲೆ ಯತ್ನದ ಪ್ರಕರಣ ಅಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ವಾದ ಮಂಡಿಸಿದ್ದರು. ಎರಡೂ ಕಡೆ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆ ಪೂರ್ಣಗೊಳಿಸಿ ಬೇಲ್ ಆದೇಶವನ್ನು ಕಾಯ್ದಿರಿಸಿದ್ದರು. ಫೆಬ್ರವರಿ 17ರಂದು ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ಶಾಂತಿನಗರ ಎಂಎಲ್‌ಎ ಹ್ಯಾರೀಸ್ ಪುತ್ರ ನಲಪಾಡ್‌, ಉದ್ಯಮಿ ಪುತ್ರ ಲೋಕೇಶ್ ಮಗ ವಿದ್ವತ್‌ ಮೇಲೆ ಹಲ್ಲೆ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv