​ಅಂದು ISIS ಸೆಕ್ಸ್​ ಸ್ಲೇವ್, ಈಗ ನೋಬೆಲ್ ಪ್ರಶಸ್ತಿ ಪುರಸ್ಕೃತೆ..!

ಇರಾಕ್​ನ ಮಾಸೂಲ್ ಮೇಲೆ ರಕ್ತಪಿಪಾಸು ಉಗ್ರ ಸಂಘಟನೆ ದಾಳಿ ಮಾಡಿ ಸಾವಿರಾರು ಜನರನ್ನು ಕೊಂದು ಹಾಕಿತ್ತು. ಮಕ್ಕಳು, ಯುವತಿಯರು, ಮಹಿಳೆಯರನ್ನ ಅವರ ವಯಸ್ಸೂ ನೋಡದೇ ಸೆಕ್ಸ್​ ಸ್ಲೇವ್ ಅಂದ್ರೆ ಲೈಂಗಿಕ ಸೇವಕಿಯನ್ನಾಗಿ ಇಟ್ಟುಕೊಳ್ಳಲಾಗಿತ್ತು. ಅದ್ರಲ್ಲೂ ಯಜ್ದಿ ಜನಾಂಗದ ಮಹಿಳೆಯರಿಗಂತೂ ಜೀವಂತ ನರಕವನ್ನೇ ತೋರಿಸಿ ಬಿಟ್ಟಿತ್ತು ಆ ಉಗ್ರ ಸಂಘಟನೆ. ನಿತ್ಯವೂ ಸಾವಿರಾರು ಯಜ್ದಿ ಮಹಿಳೆಯರ ಆಕ್ರಂದನವೇ ಲಾಲಿ ಹಾಡು ಎಂಬ, ಅವರನ್ನು ಬಳಸಿಕೊಳ್ತಾ ಇದ್ದರು ಆ ಪಾಪಿ ಉಗ್ರರು. ಹೀಗೆ, ಆ ಉಗ್ರರಿಂದ ನಿರಂತರ ಭಯಾನಕ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದ ಸಾವಿರಾರು ಮಹಿಳೆಯರಂತೆ, ಆಕೆಯೂ ಜೀವಂತ ಶವದಂತೆ ಅಲ್ಲಿ ದಿನ ದೂಡ್ತಾ ಇದ್ದರು. ಆದ್ರೆ, ಇಂದು ಇಡೀ ಜಗತ್ತಿಗೇ ಬೆಳಕು ನೀಡುವಂಥ ಸೂರ್ಯನಂತೆ ಎದ್ದು ನಿಂತಿರುವ ಆಕೆಗೆ, ಇಂದು ನೋಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ. ಅಷ್ಟಕ್ಕೂ ಆಕೆ ಯಾರು ಅಂದಿರಾ?

ಅವರು ಬೇರೆ ಯಾರೂ ಅಲ್ಲ ಉಗ್ರ ಸಂಘಟನೆಯ​ ಸೆಕ್ಸ್​ ಸ್ಲೇವ್​ ಆಗಿದ್ದ 25 ವರ್ಷದ ನಾಡಿಯಾ ಮುರ​ದ್..! ಹೌದು ಅವರಿಗೇ ಈ ಬಾರಿಯ ನೊಬೆಲ್​ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಇದರೊಂದಿಗೆ ನಾಡಿಯಾ ಮುರ​ದ್​, ನೊಬೆಲ್ ಪ್ರಶಸ್ತಿ ಪಡೆದ ಮೊದಲ ಇರಾಕಿ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ನಾಡಿಯಾ ಮುರ​ದ್​ ಜೊತೆಗೆ ವೈದ್ಯ ಡೆನಿಸ್​ ಮುಕ್ವೆಗೆ ಅವರಿಬ್ಬರಿಗೂ ಈ ಬಾರಿಯ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಜಂಟಿಯಾಗಿ ನೀಡಲಾಗಿದೆ. ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ಅಸ್ತ್ರವಾಗಿ ಬಳಸುವುದರ ವಿರುದ್ಧ ಹೋರಾಡಿದ್ದಾಕ್ಕಾಗಿ ಇವರಿಗೆ ನೊಬೆಲ್​ ಶಾಂತಿ ಪ್ರಶಸ್ತಿ ನೀಡಲಾಗುತ್ತದೆ ಎಂದು ನೊಬೆಲ್​ ಪ್ರಶಸ್ತಿ ಸಮಿತಿ ಹೇಳಿದೆ.

ನಾಡಿಯಾ ಮುರ​ದ್​ ಅದೊಮ್ಮೆ, ಸಿರಿಯಾಗೆ ಸಮೀಪ ಉತ್ತರ ಇರಾಕ್​ನ ಬೆಟ್ಟ ಪ್ರದೇಶದಲ್ಲಿ ಪ್ರಶಾಂತವಾದ ಜೀವನ ನಡೆಸುತ್ತಿದ್ದರು. ಆದ್ರೆ ಉಗ್ರವಾದಿ ಇಸ್ಲಾಮಿಕ್​ ಸ್ಟೇಟ್​ (ISIS) ಗುಂಪು 2014ರಲ್ಲಿ ನಾಡಿಯಾ ವಾಸವಿದ್ದ ಕೊಚೊ ಗ್ರಾಮದ ಮೇಲೆ ದಾಳಿಯಿಟ್ಟಿತ್ತು. ಆಗ ಅವಳ ಜೀವನ ಸಂಪೂರ್ಣವಾಗಿ ಬದಲಾಯ್ತು.

ಇಸ್ಲಾಮಿಕ್​ ಸ್ಟೇಟ್ ಉಗ್ರರು ಪುರುಷರನ್ನು ಸಾಯಿಸುತ್ತಾ.. ಮಕ್ಕಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳತೊಡಗಿದರು. ಮುಂದೆ ಅವರನ್ನು ಇಸ್ಲಾಮಿಕ್​ ಉಗ್ರರನ್ನಾಗಿ ಮಾರ್ಪಡಿಸುವುದು ಅವರ ಒಂದೇ ಗುರಿಯಾಗಿತ್ತು. ಈ ಮಧ್ಯೆ, ಹೆಣ್ಣುಮಕ್ಕಳನ್ನು ಬಲವಂತವಾಗಿ ಕೂಲಿಯಾಳುಗಳನ್ನಾಗಿಸಿಕೊಳ್ಳುವುದರ ಜತೆಗೆ, ಸೆಕ್ಸ್​ ಸ್ಲೇವ್​ಗಳನ್ನಾಗಿಯೂ ಬಳಸಿಕೊಳ್ಳತೊಡಗಿದರು.

ಇತ್ತೀಚೆಗೆ ನಾಡಿಯಾ ಮುರ​ದ್​ ಮತ್ತು ಆಕೆಯ ಸ್ನೇಹಿತೆ ಲಾಮಿಯಾ ಹಾಜಿ ಬಷಾರ್ ಉತ್ತರ ಇರಾಕ್​ನ ಬೆಟ್ಟ ಪ್ರದೇಶದಿಂದ ಇಂದಿಗೂ ನಾಪತ್ತೆಯಾಗಿರುವ ತಮ್ಮ 3 ಸಾವಿರ ಜನರ ವಿಮೋಚನೆಗಾಗಿ ಹೋರಾಡುತ್ತಿದ್ದಾರೆ. ಅಂದ ಹಾಗೆ ಇವರಿಬ್ಬರಿಗೂ 2016ರ ಯುರೋಪ್​ ಒಕ್ಕೂಟದ ಮಾನವ ಹಕ್ಕುಗಳ ಸರ್ವೋನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನಾಡಿಯಾ ಮುರ​ದ್​ಳನ್ನು ಅಪಹರಿಸಿದ ಇಸ್ಲಾಮಿಕ್​ ಸ್ಟೇಟ್ ಉಗ್ರರು ಮಾಸೂಲ್​ನಲ್ಲಿ 3 ತಿಂಗಳ ಕಾಲ ದಿಗ್ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿದ್ದರು. ಅಷ್ಟೇ ಅಲ್ಲ ನಿರಂತರವಾಗಿ ಆಕೆಯ ಮೇಲೆ ಸರಣಿ ರೇಪ್​ಗಳನ್ನೂ ಮಾಡುತ್ತಿದ್ದರಂತೆ ಆ ರಾಕ್ಷಸರು.

ಈ ಮಧ್ಯೆ, ಇಸ್ಲಾಂಗೆ ಮತಾಂತರವಾಗುವಂತೆ ಬಲವಂತಪಡಿಸುತ್ತಿದ್ದರು. ಕೊನೆಗೊಮ್ಮೆ ನಾಡಿಯಾ, ಮಾಸೂಲ್​ನಲ್ಲಿದ್ದ ಮುಸ್ಲಿಂ ಕುಟುಂಬದವರ ನೆರವಿನೊಂದಿಗೆ ಅಲ್ಲಿಂದ ಪರಾರಿಯಾಗಿ, ನರಕಯಾತನೆಯಿಂದ ಪಾರಾಗಿದ್ದರು. ಯಾಜದಿ​ ಪಂಗಡಕ್ಕೆ ಸೇರಿದ ನಾಡಿಯಾ ಪ್ರಸ್ತುತ ಜರ್ಮನಿಯಲ್ಲಿ ನೆಲೆಸಿದ್ದಾರೆ.