ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್​​ ಮಹೇಶ್ ರಾಜೀನಾಮೆ

ಬೆಂಗಳೂರು: ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ಬಿಎಸ್​​ಪಿ ಶಾಕ್​ ನೀಡಿದ್ದು, ಬಿಎಸ್​​ಪಿಯ ಎನ್​.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ಮೈತ್ರಿ ಕೂಟದಿಂದ ಬಿಎಸ್​​ಪಿ ಹೊರಬಿದ್ದಾಗಲೇ, ಎನ್​ ಮಹೇಶ್​​ ಮಾಯಾ ದೀದಿ ಹೇಳಿದರೆ ನಾನೂ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ರು. ಆದ್ರೆ, ಇಂದು ದಿಢೀರ್​ ಬೆಳವಣಿಗೆಯಲ್ಲಿ ಎನ್​​.ಮಹೇಶ್​ ರಾಜೀನಾಮೆ ನೀಡಿರೋದು ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾದಂತಾಗಿದೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ ಎನ್​.ಮಹೇಶ್, ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳನ್ನ ಮಾಡಲು ಸಾಧ್ಯವಾಗಲಿಲ್ಲ. ಸಚಿವ ಸ್ಥಾನ ವಹಿಸಿಕೊಂಡ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿಲ್ಲ. ನಾನು 20 ವರ್ಷಗಳ ಸತತ ಪರಿಶ್ರಮದಿಂದ ಗೆದ್ದಿದ್ದೇನೆ, ಖಾತೆಯನ್ನ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು. ಜನರು ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಕೆಲವರು ಗೆದ್ದು ಬೆಂಗಳೂರಿಗೆ ಹೋದರು.. ಅಲ್ಲೇ ಇದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನನ್ನ ಕ್ಷೇತ್ರದ ಕಡೆಯೂ ನಾನು ಗಮನ ಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾನು ನನ್ನ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಗಮನಾರ್ಹವೆಂದ್ರೆ ಮಾಯಾವತಿ ಅವರು ನನಗೆ ರಾಜೀನಾಮೆ ನೀಡುವಂತೆ ಹೇಳಿಲ್ಲ. ಆದರೂ ನಾನೇ ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಪ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ:
ಯಾವುದೇ ಕಾರಣಕ್ಕೂ ರಾಜೀನಾಮೆ ನಿರ್ಧಾರವನ್ನು ಬದಲಾಯಿಸುವುದಿಲ್ಲ. ಈಗಾಗಲೇ ಸಿಎಂ ಕುಮಾರಸ್ವಾಮಿಗೆ ರಾಜೀನಾಮೆ ಪತ್ರ ಕೊಟ್ಟಿದ್ದೇನೆ. ರಾಜೀನಾಮೆ ನಿರ್ಧಾರ ಬದಲಾಯಿಸೋದಿಲ್ಲ. ನಾನು ಸಚಿವ ಸ್ಥಾನ ಸ್ವೀಕರಿಸಿದ ಮೇಲೆ ಏನು ಮಾಡಿದ್ದೇನೆ ಅನ್ನೋದು, ಮುಂದೆ ಬರೋರಿಗೆ ಗೊತ್ತಾಗಲಿದೆ. ನನ್ನ ಮೇಲೆ ಸಿಎಂ ಕುಮಾರಸ್ವಾಮಿ ನಂಬಿಕೆ ಇಟ್ಟು ಖಾತೆಯನ್ನ ಕೊಟ್ಟಿದ್ದರು. ಇದೊಂದು ಅತ್ಯಂತ ಸೂಕ್ಷ್ಮವಾದ ಖಾತೆ. ನನ್ನ ವೈಯಕ್ತಿಕ ವಿಚಾರ ಸಂಬಂಧ ರಾಜೀನಾಮೆ ನೀಡಿದ್ದೇನೆ. ಇನ್ಮುಂದೆ ಪಕ್ಷ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೇನೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡುತ್ತೇನೆ. ಲೋಕಸಭೆ ಚುನಾವಣೆಗಾಗಿ ನನ್ನ ಪಕ್ಷವನ್ನು ಸಂಘಟಿಸಬೇಕಿದೆ ಅಂತಾ ಹೇಳಿದರು.