ಮೈಸೂರು ಸಿಲ್ಕ್​​ ರಿಯಾಯಿತಿ ಮಾರಾಟ ಮುಂದಿನ ಹಬ್ಬಗಳಿಗೂ ವಿಸ್ತರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ರೇಷ್ಮೆ ಇಲಾಖೆ ಇತ್ತೀಚಿಗೆ ಘೋಷಿಸಿದ್ದ ಮೈಸೂರು ಸಿಲ್ಕ್ ಸೀರೆಗಳ ರಿಯಾಯಿತಿ ಮಾರಾಟವನ್ನು ವಿಸ್ತರಿಸುವ ಪ್ಲಾನ್ ಮಾಡಿದೆ. ರೇಷ್ಮೆ ಇಲಾಖೆಯ ಸಚಿವ ಸಾ.ರಾ.ಮಹೇಶ್, ಶ್ರಾವಣಮಾಸದಲ್ಲಿ ಬರುವ ವರಮಹಾಲಕ್ಷ್ಮೀ ವ್ರತಕ್ಕೆ ವಿಶೇಷವಾಗಿ ಇಲಾಖೆಯ ವತಿಯಿಂದ ರೇಷ್ಮೆ ಸೀರೆಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದಾಗಿ ತಿಳಿಸಿದ್ರು. ರೇಷ್ಮೆ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ರಿಯಾಯಿತಿ ದರದ ರೇಷ್ಮೆ ಸೀರೆಗಳನ್ನು ಕೇವಲ ವರಮಹಾಲಕ್ಷ್ಮೀ ವ್ರತಕ್ಕೆ ಮಾತ್ರ ಸೀಮಿತ ಮಾಡದೇ, ಮುಂದಿನ ಮೂರು ತಿಂಗಳುಗಳ ಕಾಲ ಮುಂದುವರೆಸಲು ಸಚಿವರು ಪ್ಲಾನ್ ಮಾಡುತ್ತಿದ್ದಾರೆ.

ಒಂದು ದಿನದ ಬದಲು 90 ದಿನಗಳು ರೇಷ್ಮೆ ಸೀರೆಗಳು ಸೇಲ್..!
ಇನ್ನು ರೇಷ್ಮೆ ಇಲಾಖೆಯ ವತಿಯಿಂದ, ಮೈಸೂರು ಸಿಲ್ಕ್ ಸೀರೆಗಳ ಉತ್ತೇಜನಕ್ಕಾಗಿ ಹೊಸ ಪ್ರಯೋಗ ಶುರುವಾಗಿದ್ದು, ಕರ್ನಾಟಕ ರೇಷ್ಮೆ ಸೀರೆಗಳನ್ನು ಅಗ್ಗದ ಬೆಲೆಗೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಉತ್ತೇಜಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಕೊಳ್ಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತೆ ಎಂಬ ಕಾರಣದಿಂದ ಇಲಾಖೆ ಈ ರೀತಿಯಲ್ಲಿ ರಿಯಾಯಿತಿ ನೀಡಲು ಮುಂದಾಗಿದೆ. ಸೀರೆ ಮಾರಾಟವನ್ನು ಶ್ರಾವಣಮಾಸದ  ಗೌರಿ-ಗಣೇಶನ ಹಬ್ಬ, ದಸರಾದ ನವರಾತ್ರಿಗಳು ಮತ್ತು ದೀಪಾವಳಿಗೂ ವಿಸ್ತರಿಸಲು ಸಚಿವರು ಪ್ಲಾನ್ ಮಾಡಿದ್ದು, ಕೋಟಿ ಕೋಟಿ ರೂಪಾಯಿಗಳ ಲಾಭವನ್ನು ಇದರಿಂದ ನಿರೀಕ್ಷಿಸಿದ್ದಾರೆ ಎನ್ನಲಾಗಿದೆ.

ಮುಂದಿನ ಮೂರು ತಿಂಗಳು ಹಬ್ಬದ ಮೇಲೆ ಹಬ್ಬ..!
ಹೌದು, ಶ್ರಾವಣಮಾಸದಿಂದ ಆರಂಭವಾಗುವ ಹಬ್ಬಗಳ ಸಾಲು, ಗೌರಿ-ಗಣೇಶ, ದಸರಾದ ನವರಾತ್ರಿಯ ಆಯುಧಪೂಜೆ, ವಿಜಯದಶಮಿಯನ್ನೊಳಗೊಂಡಂತೆ ದೀಪಾವಳಿಯವರೆಗೂ ಸಾಗುತ್ತದೆ. ಹೀಗಾಗಿ ರೇಷ್ಮೆ ಇಲಾಖೆಯು ಕೇವಲ ವರಮಹಾಲಕ್ಷ್ಮೀ ವ್ರತಕ್ಕೆ ಮಾತ್ರ ಮೈಸೂರು ಸಿಲ್ಕ್ ಸೀರೆಗಳನ್ನು ಮಾರಾಟ ಮಾಡಿ ಸುಮ್ಮನಾಗದೇ ಎಲ್ಲಾ ಹಬ್ಬಕ್ಕೂ ಸೀರೆ ಮಾರಾಟ ಮಾಡಿದ್ರೆ, ಇಲಾಖೆಗೂ ಆದಾಯ ಬರುತ್ತದೆ, ಜೊತೆಗೆ ಮೈಸೂರು ಸಿಲ್ಕ್​​​​ ಸೀರೆಗಳು ಮತ್ತಷ್ಟು ಬ್ರ್ಯಾಂಡ್ ಆಗುತ್ತೆ ಎಂಬ ಯೋಜನೆ ಹಾಕಿಕೊಂಡು ಈ ಕೆಲಸಕ್ಕೆ ಕೈ ಹಾಕಿದೆ.

ಅದೇನೇ ಇರಲಿ, ಕೇವಲ ವರಮಹಾಲಕ್ಷ್ಮೀ ವ್ರತಕ್ಕೆ ಮೈಸೂರು ಸಿಲ್ಕ್ ಅಗ್ಗ ಎಂದುಕೊಂಡಿದ್ದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಮುಂದಿನ 90 ದಿನಗಳ ಕಾಲ ಮೈಸೂರು ಸಿಲ್ಕ್ ಸೀರೆಗಳು ಅಗ್ಗದ ಬೆಲೆಯಲ್ಲಿ ಸಿಗಲಿದೆ.

ವಿಶೇಷ ವರದಿ : ಪಿ. ಮಧುಸೂಧನ್