ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಜ್ಜಾಯ್ತು ಸಾಂಸ್ಕೃತಿಕ ನಗರಿ

ಮೈಸೂರು: ಜೂನ್ 21 ರಂದು ಮೈಸೂರಿನ ರೇಸ್‍ಕೋರ್ಸ್‍ನಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲ ಒದಗಿಸಲು ಅಗತ್ಯ ಕ್ರಮವಹಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಅಧಿಕಾರಿಗಳು, ಸಂಘ ಸಂಸ್ಥೆಗಳು ಸಕ್ರಿಯರಾಗಬೇಕು ಎಂದರು.
ಕಳೆದ ವರ್ಷ ಬೃಹತ್ ಪ್ರಮಾಣದಲ್ಲಿ ಯೋಗ ದಿನಾಚರಣೆ ಸಂಘಟಿಸಿರುವುದರಿಂದ ಅದೇ ಮಾದರಿಯಲ್ಲಿ ಎಲ್ಲ ಅಧಿಕಾರಿಗಳು ಕ್ರಿಯಾಶೀಲರಾಗುವಂತೆ ತಿಳಿಸಿದ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಯನ್ನು ನೀಡಿದರು.
ಜೆಎಸ್​ಎಸ್ ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು, ಐಸಿಎಸ್​ಸಿ ಶಿಕ್ಷಣ ಒಕ್ಕೂಟ, ಯೋಗಾ ಒಕ್ಕೂಟಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ, ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳು, ಎನ್​ಎಸ್​ಎಸ್ ಹಾಗೂ ಎನ್​ಸಿಸಿ ಕೆಡೆಟ್‍ಗಳು ಮುಂತಾದವರನ್ನು ಸೇರಿಸಲು ಸಭೆಯಲ್ಲಿ ಚರ್ಚಿಸಲಾಗಿದೆ.
ರೇಸ್‍ಕೋರ್ಸ್‍ನಲ್ಲಿ ಯೋಗಾಸನಕ್ಕೆ ಸ್ಥಳ ಮಾರ್ಕಿಂಗ್ ಜವಾಬ್ದಾರಿಯನ್ನು ಭೂ ದಾಖಲೆಗಳ ಇಲಾಖೆಗೆ ವಹಿಸಲಾಯಿತು. ಸಾರಿಗೆ ವ್ಯವಸ್ಥೆಯನ್ನು ಕೆಎಸ್​ಆರ್​ಟಿಸಿಗೆ ವಹಿಸಲಾಯಿತು. ಆಹಾರ ವ್ಯವಸ್ಥೆಗೆ ಆಹಾರ ಇಲಾಖೆಗೆ, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಒದಗಿಸಲು ಆರೋಗ್ಯ ಇಲಾಖೆಗೆ, ಪ್ರಚಾರ ಕಾರ್ಯವನ್ನು ಪ್ರವಾಸೋದ್ಯಮ ಇಲಾಖೆಗೆ, ವೇದಿಕೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ, ನೀರು ಮತ್ತು ಸ್ವಚ್ಛತೆ ಕೆಲಸವನ್ನು ಮೈಸೂರು ಮಹಾನಗರ ಪಾಲಿಕೆಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಗೆ, ಅಗ್ನಿಶಾಮಕ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಗೆ ವಹಿಸಲಾಗಿದೆ.
ರೇಸ್‍ಕೋರ್ಸ್‍ನ ವಿಶಾಲ ಜಾಗದಲ್ಲಿ ಹಾವುಗಳು ಕಂಡುಬಂದರೆ, ಹಿಡಿಯಲು ಪರಿಣಿತರನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು. ಮೈಸೂರಿನ ಯೋಗ ದಿನಾಚರಣೆಗೆ ಈಗಾಗಲೇ ಗಿನ್ನೀಸ್ ದಾಖಲೆಗೆ ಸೇರಿರುವುದು ಹೆಮ್ಮೆಯ ಸಂಗತಿ. ಈ ನಗರವನ್ನು ಯೋಗ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv