ಬಯಲುದಾರಿ-ಕವಲುದಾರಿ ಥರ ಪಾತ್ರ ನಾ ಹಿಂದೆ ಮಾಡಿರಲಿಲ್ಲ!

ಪಿಆರ್‌ಕೆ ಪ್ರೊಡಕ್ಷನ್‌ನ ಚೊಚ್ಚಲ ಸಿನಿಮಾ ಕವಲುದಾರಿ ಇಂದು ರಾಜ್ಯಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಕಾಣ್ತಿದೆ. ಚಿತ್ರ ನೋಡಲು ಹಲವು ಕಾರಣಗಳಲ್ಲಿ ಒಂದು ಮೇರುನಟ ಅನಂತ್‌ನಾಗ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ವಿಭಿನ್ನ ಪಾತ್ರದಲ್ಲಿ ನಟಿಸಿರೋದು. ತಮ್ಮ ಪಾತ್ರದ ಬಗ್ಗೆ ,ಆ ಅನುಭವದ ಬಗ್ಗೆ ಅನಂತ್‌ ನಾಗ್‌ ಫಸ್ಟ್‌ನ್ಯೂಸ್ ಜೊತೆ ಮನಬಿಚ್ಚಿ ಮಾತಾಡಿದ್ರು.

ಹಿಂದೆಂದೂ ಈ ರೀತಿ ಪಾತ್ರ ಮಾಡಿಲ್ಲ!

‘ನಾನು ಇಷ್ಟು ವರ್ಷಗಳಲ್ಲಿ ಹಲವು ಪಾತ್ರಗಳಲ್ಲಿ ನಟಿಸಿದ್ದೀನಿ. ಆದ್ರೆ ನನಗೆ ಇದೊಂದು ಮಹತ್ವ ಪೂರ್ಣವಾದ ಪಾತ್ರ. ನಿರ್ದೇಶಕರು ಪಾತ್ರದ ಬಗ್ಗೆ ಹೇಳಿದಾಗಲೇ ಅದರ ಆಳ, ಅಗಲ,ಎತ್ತರ ಮನದಟ್ಟಾಯ್ತು. ಹಿಂದೆಂದೂ ಈ ರೀತಿಯ ಪಾತ್ರ ಮಾಡೇ ಇಲ್ಲ. ಇಲ್ಲಿ ನನ್ನದು ಬಹಳ ಡೆಡಿಕೇಟೆಡ್ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ. ಅವನು ಪೊಲೀಸ್ ಆಗಿ ಕಾರ್ಯನಿರ್ವಹಿಸುವಾಗ ಸುತ್ತಮುತ್ತ ತನಗಾಗೋ ಕೆಟ್ಟ ಘಟನೆಗಳನ್ನ ಲೆಕ್ಕಿಸಲ್ಲ. ಹೀಗಿರುವಾಗ ಹಠಾತ್‌ ಒಂದು ಘಟನೆ ಘಟಿಸುತ್ತೆ. ಆಗಿದ್ದವನು ಇದ್ದಕ್ಕಿದ್ದಂತೆ ಜೀವನಕ್ಕೆ ವಿಮುಖನಾಗಿಬಿಡ್ತಾನೆ. ಎಷ್ಟರಮಟ್ಟಿಗೆ ಅಂದ್ರೆ ತಾನು ಬದುಕೋದಕ್ಕೆ ಕಾರಣವಿಲ್ಲ ಅನ್ನೋ ಹಾಗೆ ಆಗಿಬಿಟ್ಟಿರ್ತಾನೆ. ಆಗ ರಿಶಿ ಶ್ಯಾಂ ಪಾತ್ರದಲ್ಲಿ ಯಾವುದೋ ಕಾರಣದಿಂದ ನನ್ನ ಸಂಧಿಸಿಸ್ತಾನೆ. ಹಾಗೇ ಮುಂದೆ ಕಥೆ ಸಾಗಿ ಮಧ್ಯೆ ದಾರಿ ತಪ್ಪಿದ್ರೂ ನಂತ್ರ ಸರಿ ದಾರಿಗೆ ಬರ್ತಾನೆ. ಹಿಂದೆ ಅಪೂರ್ಣ ಮಾಡಿದ ಕೆಲಸ ಪೂರ್ಣ ಮಾಡಿ ಸಾರ್ಥಕತೆ ಪಡೀತಾನೆ’ ಅಂದ್ರು.