ಅಬಕಾರಿ ಇನ್ಸ್‌ಪೆಕ್ಟರ್‌ ಮರು ವರ್ಗಾವಣೆ ವಿಷ್ಯದಲ್ಲಿ ಮನೀಶ್‌ ಮೌದ್ಗಿಲ್‌ ಸಿಟ್ಟಾಗಿದ್ದು ಇದಕ್ಕಾ?

ಬೆಂಗಳೂರು: ಚುನಾವಣೆ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆ ವಿಚಾರ ದಿನಕ್ಕೊಂದು ಸ್ವರೂಪ ಪಡ್ಕೊಳ್ತಿದೆ. ಅಬಕಾರಿ ಇನ್ಸ್‌ಪೆಕ್ಟರ್‌ಗಳ ಮರು ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅಬಕಾರಿ ಆಯುಕ್ತ ಮನೀಶ್ ಮೌದ್ಗಿಲ್‌ ಮೇಲೆ ಫುಲ್ ಗರಂ ಆಗಿದ್ದರು. ಚುನಾವಣೆಗೂ ಮುನ್ನ ವರ್ಗಾವಣೆ ಮಾಡಿದ್ದ ಅಬಕಾರಿ ಇನ್ಸ್‌ಪೆಕ್ಟರ್‌ಗಳನ್ನ ಮರು ವರ್ಗಾವಣೆ ಮಾಡಿ ಎಂದು ಆದೇಶ ನೀಡಿದ್ದರೂ ಮನೀಶ್‌ ಮೌದ್ಗಿಲ್‌ ಧಿಕ್ಕರಿಸಿದ್ದರು. ಮನೀಶ್ ಮೌದ್ಗಿಲ್ ಯಾಕೆ ಧಿಕ್ಕರಿಸಿದ್ದರು ಅನ್ನೋದಕ್ಕೆ ಇದೀಗ ಹೊಸ ಟ್ವಿಸ್ಟ್​ ಸಿಕ್ಕಿದೆ.

ಇದೀಗ ವೈನ್​ಶಾಪ್​​ಗೆ ಮರುಪರವಾನಗಿ ನೀಡುವ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಬಕಾರಿ ಆಯುಕ್ತ ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ. ವೈನ್​ಶಾಪ್​ಗಳ ನಡೆಸುವವರಿಗೆ ಪರವಾನಿಗೆ ನೀಡುವ ಪ್ರಕ್ರಿಯೆ ಆನ್​ಲೈನ್​ ಮೂಲಕವೇ ನಡೆಯಲಿದೆ. ಪರಾವನಿಗಿ ನೀಡುವ ವಿಚಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಕರ್ನಾಟಕ ಎಕ್ಸೈಸ್ ಆ್ಯಕ್ಟ್​ನ 1968 ರ ನಿಯಮ ಪ್ರಕಾರದಂತೆ ಆನ್​ಲೈನ್​ ಮೂಲಕವೇ ನಡೆಯಲಿದೆ. ಬಯಸುವವರು ಜೂನ್ 10, 2018ರೊಳಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮುನೀಶ್ ಮೌದ್ಗಿಲ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದರು. ಇದು ಸಹಜವಾಗಿಯೇ ಅಬಕಾರಿ ಇನ್ಸ್​​ಪೆಕ್ಟರ್​​ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಒಂದು ವೈನ್​ಶಾಪ್ ತೆರೆಯಬೇಕಾದ್ರೆ ಕೆಲ ಅಬಕಾರಿ ಡಿಸಿ​ಗಳು ಒಂದು ಸಹಿಗೆ ಬರೋಬ್ಬರಿ 5 ಲಕ್ಷ ಪಡೆಯುತ್ತಿದ್ದರು. ಹಾಗೇ ಮರುಪರವಾನಗಿ ನೀಡಲು 50 ಸಾವಿರದಿಂದ ಒಂದು ಲಕ್ಷದವರೆಗೂ ಲಂಚ ಪಡೆಯುತ್ತಾರೆ ಎನ್ನಲಾಗಿತ್ತು. ಹೀಗಾಗಿ ಮೌದ್ಗಿಲ್ ಮ್ಯಾನ್ಯುವಲ್ ಪ್ರಕ್ರಿಯೆಗೆ ಅಂತ್ಯಹಾಡಿ ಆನ್​ಲೈನ್​ ಮೂಲಕ ಪರವಾನಗಿ ನೀಡಲು ಮುಂದಾಗಿದ್ದಾರೆ. ಇವರ ಈ ಆದೇಶ ಹಲವು ದಶಕಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಬಕಾರಿ ಇನ್ಸ್​ಪೆಕ್ಟರ್​ಗಳಿಗೆ ಸಂಕಷ್ಟ ತಂದಿದೆ. ಇದೇ ಕಾರಣಕ್ಕಾಗಿ ಅಬಕಾರಿ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆಯನ್ನು ಪ್ರತಿಭಟಿಸತೊಡಗಿದ್ದಾರೆನ್ನಲಾಗ್ತಿದೆ. ಸಿಎಂ ಕುಮಾರಸ್ವಾಮಿಯವರ ವರೆಗೂ ಕಂಪ್ಲೇಂಟ್ ತಗೊಂಡು ಹೋಗಿ ಮನೀಶ್‌ ಮೌದ್ಗಿಲ್‌ ವಿರುದ್ಧ ಸಮರ ಸಾರಿರೋ ತರ ಭಾಸವಾಗ್ತಿದೆ.

ಹಾಗಂತ ಮನೀಶ್ ಮೌದ್ಗಿಲ್‌ ಸುಖಾ ಸುಮ್ಮನೆ ವರ್ಗಾವಣೆ ಮಾಡಿಲ್ಲ. ಇದಕ್ಕಾಗಿ ಕೆಲ ಮಾನದಂಡಗಳನ್ನೂ ಅನುಸರಿಸಿದ್ದಾರೆ. 3 ವರ್ಷಕ್ಕಿಂತಾ ಹೆಚ್ಚು ಕಾಲ ಒಂದೇ ಜಾಗದಲ್ಲಿ ಕರ್ತವ್ಯ ಮಾಡ್ತಿರೋರು ಮತ್ತು ಸ್ವಂತ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರೋರನ್ನ ಮುಖ್ಯವಾಗಿ ಬೇರೆಡೆ ವರ್ಗಾಯಿಸಿದ್ದರು. ಇಷ್ಟಾದ್ರೂ ಸಿಎಂ ವರೆಗೂ ಕಂಪ್ಲೇಂಟ್ ಹೋಗಿರೋದ್ರಿಂದ, ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ತರಲು ಯತ್ನಿಸಿದ ಮೌದ್ಗಿಲ್‌ಗೆ ಹಿನ್ನಡೆಯಾದಂತಾಗಿದೆ. ಖುದ್ದು ತಾವೇ ಈಗ ಅಮಾನತು ಬೆದರಿಕೆ ಎದುರಿಸುವಂತಾಗಿದೆ. ಸಿಎಂ ಕುಮಾರಸ್ವಾಮಿಗೆ ಈ ಇನ್‌ಸೈಡ್‌ ವಿಚಾರಗಳು ಗೊತ್ತಿದೆಯೋ ಇಲ್ವೋ?

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv