ದೇಶದ ಆಡಳಿತ ನಂಬಿಕೆಗೆ ಅರ್ಹರಲ್ಲದವರ ಕೈಗೆ ಸಿಕ್ಕಿದೆ: ಮುಖ್ಯಮಂತ್ರಿ ಚಂದ್ರು

ಮೈಸೂರು: ದೇಶದ ಆಡಳಿತವು ನಂಬಿಕೆಗೆ ಅರ್ಹರಲ್ಲದವರ ಕೈಗೆ ಸಿಕ್ಕಿದೆ, ಮೋದಿ ಸರ್ವಾಧಿಕಾರಿ ಆಡಳಿತ ‌ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ನಗರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯ ಶಂಕರ್ ಪರ ಮತಯಾಚನೆ ಮಾಡಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಮತ ಹಾಕಬೇಕಾದಾಗ ಎಚ್ಚರಿಕೆಯಿಂದ ಮತ ಹಾಕಬೇಕು. ಕಾಂಗ್ರೆಸ್ ಏನೂ ಮಾಡಿಲ್ಲ ಅಂತಾ ಬಿಜೆಪಿಯವರು ಹೇಳುತ್ತಾರೆ. ಕಾಂಗ್ರೆಸ್​​ನ ಹಲವು ಪ್ರಥಮಗಳು ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ದೇಶಕ್ಕೆ ಹತ್ತು ಹಲವು ಪ್ರಥಮಗಳನ್ನ ನೀಡಿದೆ. ಬಿಜೆಪಿಯವರೇ ಏನ್ ಮಾಡಿದ್ದಾರೆ ಅಂತ ಹೇಳಲಿ. ಅದನ್ನ ಬಿಟ್ಟು ನಾವೇ ಮಾಡಿದ್ದೇವೆ ಅಂತ ಯಾಕೆ ಸುಳ್ಳು ಹೇಳ್ತೀರಾ? ಬಿಜೆಪಿಯವರು ಪ್ರವಾಸಕ್ಕೆ ಕೋಟಿ ಕೋಟಿ  ಹಣ ವೆಚ್ಚ ಮಾಡಿದ್ದಾರೆ. ಇದೇ ಇರಬಹುದು ಅಭಿವೃದ್ಧಿ ಅಂದರೆ ಇವರ ಪ್ರಕಾರ. ಮೋದಿ ಹಸಿ ಸುಳ್ಳಿನ ಸರದಾರ, ಮಾತಿನ ಮೋಡಿಗಾರ ಅಂತ ನೀವು ಬರೆದು ಕೊಳ್ಳಿ ಎಂದು ಅವರು ಹೇಳಿದರು. ಐದು ವರ್ಷದಿಂದ ಯಾಕೆ ರಾಮಮಂದಿರ ಕಟ್ಟಲಿಲ್ಲ. ಯಾರ್ ಬೇಡ ಅಂತ‌ ಹೇಳಿದ್ರು. ಬರಿ ಸುಳ್ಳನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯನ್ನ ಮುಖ್ಯಮಂತ್ರಿ ಚಂದ್ರು ಕಟುವಾಗಿ ಟೀಕಿಸಿದರು.

ಸಂಸದ ಪ್ರತಾಪ್ ಸಿಂಹ ಬಾಯಿ ಸರಿಯಿಲ್ಲ.‌ ಅವರ ಬಗ್ಗೆ ಮಾತನಾಡಿ ನನ್ನ ಬಾಯಿ ಯಾಕೆ ಕೊಳಕು ಮಾಡಿಕೊಳ್ಳಲಿ. ಪ್ರತಾಪ್ ಸಿಂಹ ಆರ್‌ಎಸ್‌ಎಸ್‌ನ ಸ್ಮೂತ್ ಮೈಕ್. ಐದು ವರ್ಷಗಳಲ್ಲಿ ಅವರು ಏನೂ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಸಿ.ಎಚ್.ವಿಜಯ ಶಂಕರ್ ಪ್ರಬುದ್ಧ ರಾಜಕಾರಣಿ.  ಹೀಗಾಗಿ ಮೈತ್ರಿ ಅಭ್ಯರ್ಥಿ ವಿಜಯಶಂಕರ್​ರನ್ನ ಗೆಲ್ಲಿಸುವಂತೆ ಮನವಿ ಮಾಡಿದರು. ರಾಜ್ಯದ 28 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ನನಗೆ ಹೈಕಮಾಂಡ್ ಸೂಚಿಸಿದೆ. ಹೈಕಮಾಂಡ್ ಸೂಚಿಸಿದರೆ ಮಂಡ್ಯದಲ್ಲೂ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರಕ್ಕೆ ಹೋಗುತ್ತೇನೆ. ಸುಮಲತಾ ಅವರಿಗೆ ಒಳ್ಳೆಯದಾಗಲಿ ಅಂತಷ್ಟೇ ಹೇಳಬಹುದು. ಚುನಾವಣೆ ಮುಗಿದ ಮೇಲೆ ಸುಮಲತಾ ಅವರನ್ನು ಭೇಟಿ ಮಾಡುತ್ತೇನೆ ಅಂತಾ ಇದೆ ವೇಳೆ ಮುಖ್ಯಮಂತ್ರಿ ಚಂದ್ರು ಹೇಳಿದರು.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv