ಎಂಟಿಬಿಗೆ ಸಚಿವ ಸ್ಥಾನ ಕೊಡೋದಾದ್ರೆ, ನನ್ಗೂ ಕೊಡಿ: ಶಾಸಕ ಶಿವಳ್ಳಿ

ಧಾರವಾಡ: ದಕ್ಷಿಣ ಕರ್ನಾಟಕದವರಾದ ಶಾಸಕ ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ಕೊಡುವುದಾದರೆ, ಉತ್ತರ ಕರ್ನಾಟಕದವನಾದ ನನಗೂ ಸಚಿವ ಸ್ಥಾನ ಕೊಡಲೇ ಬೇಕು ಅಂತಾ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ‌ ಹೆಚ್ಚು ಸಚಿವ ಸ್ಥಾನ ಕೊಡಿ ಅಂತ ಬೇಡಿಕೆ ಇಟ್ಟಿದ್ದೇವೆ. ನಾನು ಕೂಡ ಒಬ್ಬ ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿ, ನನಗೆ ಕೊಡಲೇಬೇಕು ಎಂದು ಒತ್ತಾಯಿಸುತ್ತೇನೆ. ಒಂದು ವೇಳೆ ಸಚಿವ ಸ್ಥಾನ ಸಿಗದೇ ಹೋದರೆ, ಕಾಂಗ್ರೆಸ್​ನಿಂದ ಆರಿಸಿ ಬಂದಿರುವ ನಾನು, ಬಂಡಾಯ ಏಳುವುದಿಲ್ಲ ಎಂದು ಶಾಸಕ ಸಿ.ಎಸ್.ಶಿವಳ್ಳಿ ಸ್ಪಷ್ಟಪಡಿಸಿದ್ದಾರೆ.
ಧಾರವಾಡದಲ್ಲಿನ ನೀರಾವರಿ ನಿಗಮ ಸ್ಥಳಾಂತರದ ವಿಷಯವಾಗಿ ಮಾತನಾಡಿದ ಶಿವಳ್ಳಿ, ಈ ವಿಚಾರವಾಗಿ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಧಾರವಾಡದಿಂದ ನೀರಾವರಿ ನಿಗಮ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದರು.
ಇನ್ನು ಸಿಎಂ ಕುಮಾರಸ್ವಾಮಿಯವರ ಧಾರವಾಡ ಭೇಟಿ ಕೆಲಸದ ಒತ್ತಡದಿಂದ ರದ್ದಾಗಿದೆ. ಅದಕ್ಕೆ ಸಿಎಂಗೆ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆ ಇದೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಶಾಸಕ ಶಿವಳ್ಳಿ ಅಭಿಪ್ರಾಯಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv