ಬೆಂಬಲ ಬೆಲೆ ಘೋಷಣೆ ಪ್ರಧಾನಿಗಳ ಐತಿಹಾಸಿಕ ನಿರ್ಧಾರ: ದೊಡ್ಡಪ್ಪಗೌಡ ನರಿಬೋಳ

ಕಲಬುರ್ಗಿ: ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಅಂತಾ ಬಿಜೆಪಿ‌ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರೈತರ ಬೆಳೆಗೆ ಬೆಂಬಲ ಬೆಲೆ ನೀಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೆಚ್​​​ಡಿಕೆ ಹೇಳಿದ್ದರು. ಆದರೆ ಸಾಲ ಮನ್ನಾ ಮಾಡಿದ್ದು ಉತ್ತರ ಕರ್ನಾಟಕ ಹಾಗೂ ಹೈ.ಕ ಭಾಗಕ್ಕೆ ಅನುಕೂಲವಾಗಿಲ್ಲ ಎಂದರು.

‘ಸಂಪೂರ್ಣ ಸಾಲ ಮನ್ನಾ ಮಾಡಿದರೆ ಅನುಕೂಲ’
ನಮ್ಮ ಜಿಲ್ಲೆಯ ಡಿಸಿಸಿ‌ ಬ್ಯಾಂಕ್ ಮೂಲಕ ರೈತರಿಗೆ ವಾರ್ಷಿಕವಾಗಿ ಸುಮಾರು 400 ಕೋಟಿ‌ ಸಾಲ ನೀಡಲಾಗುತ್ತದೆ. ಇಲ್ಲಿ ಸಾಲ ಪಡೆಯುವ ರೈತರು ಪ್ರತಿವರ್ಷ ನವೀಕರಣ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಸುಸ್ತಿಸಾಲ ಮನ್ನಾ ಮಾಡಿದ್ದು ನಮ್ಮ ಭಾಗದವರಿಗೆ ಅನುಕೂಲವಾಗಿಲ್ಲ ಎಂದು ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಹೇಳಿದರು. ಹೆಚ್​​​ಡಿಕೆ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಂಪೂರ್ಣ ಸಾಲ ಮನ್ನಾ ಮಾಡಿದಾಗ ಮಾತ್ರ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರ ಇನ್ನೂ ಟೇಕಾಫ್​ ಆಗಿಲ್ಲ’
ಹೈದರಾಬಾದ್ ಕರ್ನಾಟಕದಲ್ಲಿ ಹಲವು ಪ್ರಮುಖ‌ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ಅಧಿಕಾರ ವಹಿಸಿಕೊಂಡು ಮೂರ್ನಾಲ್ಕು‌ ತಿಂಗಳಾಗಿದೆ, ಆದರೂ ಟೇಕಾಫ್ ಆಗಿಲ್ಲ. ನಮ್ಮ ಕಲಬುರ್ಗಿ ಜಿಲ್ಲೆಯಲ್ಲಿಯೂ ಈ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದರು. ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv