ಮೌಂಟ್​ ಎವರೆಸ್ಟ್​ ಮೇಲೆ ಟ್ರಾಫಿಕ್ ಜಾಮ್, ಈವರೆಗೆ 10 ಜನರ ಸಾವು

ಭೂಮಿ ಮೇಲಿನ ಅತ್ಯಂತ ಎತ್ತರದ ಶಿಖರ ಮೌಂಟ್​​ ಎವರೆಸ್ಟ್ ಏರಬೇಕು ​ಅನ್ನೋದು ಸಾಕಷ್ಟು ಪರ್ವತಾರೋಹಿಗಳ ಕನಸು. ಹಾಗಂತ ಎವರೆಸ್ಟ್​ ಏರೋದು ಸುಲಭದ ಮಾತಲ್ಲ. ಕೊರೆಯೋ ಚಳಿಯಲ್ಲಿ ಪ್ರಾಣ ಕೈಯಲ್ಲಿಡಿದು 29,029 ಅಡಿ ಎತ್ತರದ ಪರ್ವತವನ್ನ ಏರಬೇಕು. ಅದಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕು, ಸೂಕ್ತ ಹವಾಮಾನಕ್ಕಾಗಿ ಕಾಯಬೇಕು. ಮೌಂಟ್ ಎವರೆಸ್ಟ್​ ಏರೋಕೆ ಎರಡು ದಾರಿಗಳಿವೆ. ಒಂದು ನೇಪಾಳ ಮಾರ್ಗ ಮತ್ತೊಂಡು ಟಿಬೆಟ್​ನದ್ದು. ​​ಮಾರ್ಚ್​​ನಿಂದ ಮೇ ತಿಂಗಳ ನಡುವೆ ಹವಾಮಾನ ಅನುಕೂಲಕರವಾಗಿರೋದ್ರಿಂದ ಈ ಸಮಯದಲ್ಲಿ ಮೌಂಟ್​ ಎವರೆಸ್ಟ್​ ಏರುವವರ ಸಂಖ್ಯೆ ಹೆಚ್ಚು.

ಈ ಬಾರಿ ನೇಪಾಳ, ತಲಾ ₹7 ಲಕ್ಷದಂತೆ 378 ಜನರಿಗೆ ಪರ್ವತಾರೋಹಣ ಮಾಡಲು ಅನುಮತಿ ನೀಡಿದೆ. ಹೀಗಾಗಿ ಎವರೆಸ್ಟ್​ ಹತ್ತಲು ಪರ್ವತಾರೋಹಿಗಳು ಸಾಲುಸಾಲಾಗಿ ನಿಂತಿದ್ದು, ಬೇಗನೆ ಮುಂದೆ ಸಾಗಲಾರದೆ ಗಂಟೆಗಳ ಕಾಲ ಅಲ್ಲೇ ಸಿಲುಕಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಪರ್ವತಾರೋಹಿಗಳು ಎವರೆಸ್ಟ್​ ಏರುತ್ತಿರೋದ್ರಿಂದ ಟ್ರಾಫಿಕ್ ಜಾಮ್ ಉಂಟಾಗಿ, ಈವರೆಗೆ 10 ಜನರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಬ್ರಿಟಿಷ್​ ಪರ್ವತಾರೋಹಿ ರಾಬಿನ್​ ಫಿಶರ್​ ಶಿಖರವೇರಿದರಾದ್ರೂ, ಅಲ್ಲ್ಲಿಂದ ವಾಪಸ್​ ಬರುವ ವೇಳೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ಟಿಬೆಟ್​​ ಮಾರ್ಗದಲ್ಲಿ ನಿನ್ನೆ ಬೆಳಗ್ಗೆ 56 ವರ್ಷದ ಐರಿಶ್​ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇವರು ಶಿಖರವೇರುವ ಮೊದಲೇ ವಾಪಸ್ಸಾಗುತ್ತಿದ್ದರು. ಈ ವೇಳೆ 22,965 ಅಡಿ ಎತ್ತರದಲ್ಲಿ ಟೆಂಟ್​​ನಲ್ಲಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇನ್ನು ಕಳೆದ ವಾರ ಭಾರತದ ನಾಲ್ವರು ಚಾರಣಿಗರು ಹಾಗೂ ಅಮೇರಿಕಾ, ಆಸ್ಟ್ರಿಯಾ ಮತ್ತು ನೇಪಾಳದಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮತ್ತೋರ್ವ ಐರಿಶ್​ ವ್ಯಕ್ತಿ ಕಾಣೆಯಾಗಿದ್ದು, ಅವರೂ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಅಂಜಲಿ ಕುಲಕರ್ಣಿ, ಕಲ್ಪನಾ ದಾಸ್​ ಹಾಗೂ ನಿಹಾಲ್ ಭಗವಾನ್ ಸಾವನ್ನಪ್ಪಿರುವ ಭಾರತೀಯರಲ್ಲಿ ಮೂವರು. ಇವರಲ್ಲಿ ನಿಹಾಲ್ ಭಗವಾನ್ ಸುಮಾರು 12 ಗಂಟೆಗಳ ಕಾಲ ಪರ್ವತದ ಮೇಲಿನ ಟ್ರಾಫಿಕ್​ನಲ್ಲಿ ಸಿಲುಕಿದ್ದರು ಎಂದು ಪ್ರವಾಸ ಆಯೋಜಿಸಿದ್ದ ಕೇಶವ್ ಎಂಬವರು ಹೇಳಿದ್ದಾರೆ. ಇನ್ನು ಶುಕ್ರವಾರದ ವೇಳೆಗೆ ಸುಮಾರು 600 ಜನರು ನೇಪಾಳ ಮಾರ್ಗದ ಮೂಲಕ ಎವರೆಸ್ಟ್​​ ಶಿಖರ ತಲುಪಿದ್ದಾರೆ ಎಂದು ಇಲ್ಲಿನ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv