ಜನ್ಮವಿತ್ತು, ಪ್ರಾಣತೆತ್ತ ತಾಯಿ.. ವಿಧಿ ಇಷ್ಟೊಂದು ಕ್ರೂರಿಯಾ.!

ಕೊಡಗು: ತಾಯ್ತನ ಅನ್ನೋದು ಪ್ರತಿಯೊಬ್ಬ ಹೆಣ್ಣಿನ ಕನಸು. ತಾಯಿ ಕೂಡಾ ತನ್ನ ಭವಿಷ್ಯಕ್ಕಿಂತ ಹೆಚ್ಚಾಗಿ ಕರುಳ‌ ಕುಡಿ ಬಗ್ಗೆ ಅಗಾಧ ಕನಸು ಕಂಡಿರುತ್ತಾಳೆ. 9 ತಿಂಗಳು ಒಡಲೊಳಗೆ ಬೆಚ್ಚಗಿರುವ ಕುಡಿಯನ್ನು ಕಣ್ತುಂಬಿಕೊಳ್ಳೋದಕ್ಕಾಗಿ ಎದುರು ನೋಡುತ್ತಿರುತ್ತಾಳೆ.
ಆಕೆ ಕೂಡಾ ಹೀಗೇ.. ತನ್ನ ಮಗುವಿನ‌ ಏನೇನೋ ಕನಸು ಹೊತ್ತು, ಕಂದನ‌ನ್ನು ನೋಡೋದಕ್ಕಾಗಿ ಕಾದಿದ್ದಳು. ನಿರೀಕ್ಷೆಯಂತೆ ಹೆರಿಗೆ ಕೂಡಾ ಆಯ್ತು.‌ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ಳು. ಆದ್ರೆ ಅವಳ‌ ಸಂತಸ ಹೆಚ್ಚು ಹೊತ್ತು ಇರಲಿಲ್ಲ. ಪುಟ್ಟ ಕಂದಮ್ಮ ಕಣ್ಣು ಮಿಟುಕಿಸುತ್ತಾ ಪಕ್ಕದಲ್ಲಿದ್ರೆ, ಮಗುವಿಗೆ ಜನ್ಮ ನೀಡಿದ ತಾಯಿ ಮಗುವನ್ನು ಬಿಟ್ಟು ಇಹಲೋಕ ತ್ಯಜಿಸಿಯಾಗಿತ್ತು.
ಅತ್ತ ಮಗು ಜನಿಸಿದ ಸಂತಸದಲ್ಲಿದ್ದ ಕುಟುಂಬದವರಿಗೆ ಇನ್ನಿಲ್ಲದ ಆಘಾತ. ಆ ನತದೃಷ್ಟ ತಾಯಿಯ ಹೆಸರು ಅನ್ನಡಿಯಂಡ ಲಾಸ್ಯ. ಮೂಲತಃ ಮೂರ್ನಾಡು ನಿವಾಸಿಯಾದ 26 ವರ್ಷದ ಲಾಸ್ಯ ವರ್ಷದ ಹಿಂದೆ ವಿರಾಜಪೇಟೆಯ ಕಾರ್ಯಪ್ಪ ಎಂಬುವವರನ್ನು ವಿವಾಹವಾಗಿದ್ದರು. ತುಂಬು ಗರ್ಭಿಣಿಯಾಗಿದ್ದ ಲಾಸ್ಯಾಗೆ ಜುಲೈ 1ರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ವಿರಾಜಪೇಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ಬೆಳಗಿನ ಜಾವ ಹೆಣ್ಣು ಮಗುವಿನ ಜನನವೂ ಆಗಿದೆ.
ಲಾಸ್ಯ ಮಾತ್ರ ನೋವಿನಲ್ಲಿ ನರಳುತ್ತಿದ್ರು. ನಿರಂತರ ರಕ್ತಸ್ರಾವವಾಗುತ್ತಿದ್ದರಿಂದ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು. ಸೋಮವಾರ ಸಂಜೆಯಾದ್ರೂ ಚೇತರಿಕೆ ಕಾಣದಿದ್ದಾಗ ಮಡಿಕೇರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದ್ರೆ ಅದಾಗಲೇ ದೇಹದಿಂದ ಬಹುತೇಕ ರಕ್ತ ಹೋಗಿದ್ದರಿಂದ ನಿತ್ರಾಣಗೊಂಡಿದ್ದ ದೇಹಕ್ಕೆ ಚಿಕಿತ್ಸೆ ನೀಡಿದ್ರೂ ಫಲಿಸದೇ ಮೃತಪಟ್ಟಿದ್ದಾಳೆ. ಅತ್ತ ಅದ್ಯಾವುದರ ಪರಿವೇ ಇಲ್ಲದ ಪುಟ್ಟಜೀವ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv