ಬೆಳಗ್ಗೆ ಎದ್ದು ವಾಕ್​​ ಹೋಗಿ.. ನೂರ್ಕಾಲ ಬಾಳಿ..!

ಆರೋಗ್ಯನೇ ಭಾಗ್ಯ ಅಂತಾರೆ. ಆದ್ರೆ ಈಗಿನ ಬ್ಯೂಸಿ ಶೆಡ್ಯೂಲ್​ನಲ್ಲಿ ಆರೋಗ್ಯಾನ ಕಾಪಾಡಿಕೊಳ್ಳೋಕೆ ನಮ್ಮತ್ರ ಟೈಮ್​ ಇರೋಲ್ಲ. ಅದ್ರಲ್ಲೂ ಕೆಲ್ಸ ಮುಗಿಸಿ​ಕೊಂಡು ಬಂದು ಒದ್ಸಲ ಬೆಡ್​ ಮೇಲೆ ಬಿದ್​ ಬಿಟ್ರೆ ಜಪ್ಪಯ್ಯ ಅಂದ್ರೂ ಬೇಗ ಏಳೋಕೆ ಆಗೋಲ್ಲ. ಬೆಳಗ್ಗಿನ ಸುಖ ನಿದ್ದೆಯನ್ನು ಮಿಸ್​ ಮಾಡ್ಕೊಳ್ಳೋಕೆ ಯಾರು ತಾನೆ ಇಷ್ಟ ಪಡ್ತಾರೆ ಹೇಳಿ. ಅದು ಸಂಡೆ ಆದ್ರೆ ಮುಗ್ದೇ ಹೋಯ್ತು. ಆರಾಮಾಗಿ ಮಧ್ಯಾಹ್ನದ ಊಟದ ಹೊತ್ತಿಗೆ ಏಳೋರೆ ಹೆಚ್ಚು. ಇನ್ನು ವಾಕಿಂಗ್​ ಹೋಗೋಕೆ ನಮ್ಮತ್ರ ಟೈಮ್​ ಎಲ್ಲಿದೆ? ಆದ್ರೆ ಮುಂಜಾನೆ ಎದ್ದು ವಾಕಿಂಗ್​ ಹೋಗ್ದೆ ಇರೋರು ತುಂಬಾನೇ ನಷ್ಟ ಅನುಭವಿಸುತ್ತಾರೆ. ಅದೇನು ಗೊತ್ತಾ ಹಾಗಾದ್ರೆ ಈ ಸ್ಟೋರಿನ ನೀವ್​ ಓದ್ಲೇಬೇಕು.

⦁ ದಿನ ಬೆಳಿಗ್ಗೆ ಎದ್ದು ವಾಕ್​ ಮಾಡೋದ್ರಿಂದ ಅರ್ಧದಷ್ಟು ಹೃದಯಾಘಾತ ತಪ್ಪಿಸುತ್ತೆ. ದೇಹದ ಮೇಲೆ ಅಧಿಕ ಒತ್ತಡ ಹಾಕಿ ವ್ಯಾಯಾಮ ಮಾಡೋದ್ರಿಂದ ಹೃದಯಾಘಾತವಾಗುವ ಸಂಭವವಿರುತ್ತೆ. ಆದರೆ ಮಾರ್ನಿಂಗ್​ ವಾಕ್​ ದೇಹಕ್ಕೆ ಉತ್ತಮ ಮತ್ತು ಇದು ಹೃದಯ ರೋಗಗಳ ಅಪಾಯ ಕಡಿಮೆ ಮಾಡುತ್ತೆ.

⦁ ನಿಮ್ಮ ಹೃದಯ ಮತ್ತು ಶ್ವಾಸಕೋಶದ ಶಕ್ತಿ ಹೆಚ್ಚಿಸುತ್ತೆ. ವಾಕಿಂಗ್​ ಮಾಡೋದ್ರಿಂದ ದೇಹದ ಸಾಮರ್ಥ್ಯ ಹೆಚ್ಚೋದ್ರ ಜೊತೆಗೆ ಒಂದು ಚೂರು ದಣಿವಿಲ್ಲದೆ ದಿನನಿತ್ಯದ ಚಟುವಟಿಕೆಗಳನ್ನ ಆರಾಮಾಗಿ ಮಾಡಬಹುದು. ಇದು ರೋಗಗಳನ್ನು ತಡೆಗಟ್ಟುತ್ತೆ. ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.

⦁ ಬ್ಲಡ್​ ಪ್ರೆಶರ್​ ಕಡಿಮೆ ಮಾಡಲು ಸಹಕಾರಿಯಾಗಿದೆ. ದೇಹದಲ್ಲಿ ರಕ್ತದೊತ್ತಡ ಕಡಿಮೆಯಾಗಿ ರಕ್ತ ಸಂಚರಿಸಲು ಸಹಾಯಕಾರಿಯಾಗಿದೆ.

⦁ ರೆಗ್ಯೂಲರ್​ ವಾಕಿಂಗ್​ನಿಂದ ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್​ ಮಟ್ಟ ಹೆಚ್ಚಿಸುತ್ತದೆ.

⦁ ಬೆಳ್ಳಂಬೆಳಗ್ಗೆ ವಾತಾವರಣ ಅಷ್ಟೊಂದು ಮಲಿನಗೊಂಡಿರುವುದಿಲ್ಲ. ಆ ಸಮಯದಲ್ಲಿ ಸೇವಿಸುವ ಆಮ್ಲಜನಕ ದೇಹಕ್ಕೆ ಉತ್ತಮ. ಸಾಧಾರಣವಾಗಿ 40 ವರ್ಷದ ನಂತರ ಕೀಲುನೋವಿನಿಂದ ಬಳಲುತ್ತಿರುವವರ ಪ್ರಮಾಣ ಹೆಚ್ಚು. ಅಂತವರಿಗೆ ಬೆಳಗ್ಗಿನ ಆಮ್ಲಜನಕ ಉತ್ತಮ. ಇದು ಕೀಲುಗಳಿಗೆ ಶಕ್ತಿಯನ್ನು ತುಂಬುತ್ತೆ.

⦁ ನಾವು ಯಾವಾಗ ಫಿಟ್​ ಌಂಡ್​ ಹೆಲ್ದಿಯಾಗಿರುತ್ತೇವೆಯೋ ಆಗ ನಮ್ಮ ಆತ್ಮ ವಿಶ್ವಾಸ ಹೆಚ್ಚುತ್ತೆ. ನಾವು ವಾಕಿಂಗ್​ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ ಎಂದರೆ ನಮ್ಮ ದೈನದಿಂದ ಜೀವನದ ಒತ್ತಡದಿಂದ ಮುಕ್ತರಾಗಿದ್ದೇವೆ ಎಂದರ್ಥ.

⦁ ಪ್ರತಿನಿತ್ಯ ವಾಕಿಂಗ್​ಗೆ ಹೋಗೋದ್ರಿಂದ ಬೆನ್ನುನೋವಿನಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಸ್ನಾಯುಗಳ ಬೆಳವಣಿಗೆಗೆ ಇದು ಸಹಾಯಕ. ಜೊತೆಗೆ ದೇಹದಲ್ಲಿ ರಕ್ತ ಸಂಚಲನ ಕೂಡ ಉತ್ತಮವಾಗಿರುತ್ತದೆ.

⦁ ದಿನನಿತ್ಯ ವಾಕಿಂಗ್​ ಮಾಡುವುದರಿಂದ ಒಂದು ರೀತಿಯ ಪಾಸಿಟಿವ್​ ಎನರ್ಜಿ ನಿಮ್ಮೊಳಗಿರುತ್ತೆ. ಯಾವುದೇ ರೀತಿಯ ಒತ್ತಡದ ಸಂದರ್ಭವನ್ನು ಕೂಲ್​ ಆಗಿ ನಿಭಾಯಿಸುವ ಶಕ್ತಿ ನಿಮಗಿರುತ್ತೆ. ಜೊತೆಗೆ ನಿಮ್ಮ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿ ಉತ್ತಮವಾಗಿರುತ್ತೆ.

⦁ ವಾರದಲ್ಲಿ ನಾಲ್ಕು ಬಾರಿ ದಿನಕ್ಕೆ 45 ನಿಮಿಷಗಳ ಕಾಲ ವಾಕಿಂಗ್​ ಮಾಡುವುದರಿಂದ ವರ್ಷಕ್ಕೆ 8-10ಕೆ.ಜಿ ತೂಕ ಕಳೆದುಕೊಳ್ಳಬಹುದು. ಜೊತೆಗೆ ದೇಹದಲ್ಲಿನ ಬೇಡದ ಕೊಬ್ಬುಗಳನ್ನು ಕೂಡ ಕರಗಿಸಬಹುದು. ಒಟ್ಟಿನಲ್ಲಿ ವಾಕಿಂಗ್​ ಆರೋಗ್ಯದ ದೃಷ್ಟಿಯಲ್ಲಿ ಸುಲಭ ಹಾಗೂ ಹೆಲ್ತಿ ವಿಧಾನ.

ವಿಶೇಷ ಬರಹ- ಶ್ವೇತಾ ಪೂಜಾರಿ
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv