ರೈಲು 5 ಗಂಟೆ ತಡ, ಪರೀಕ್ಷೆ ಮಿಸ್ ಮಾಡಿಕೊಂಡ 500ಕ್ಕೂ ಹೆಚ್ಚು ಅಭ್ಯರ್ಥಿಗಳು

ಬೆಂಗಳೂರು: ರೈಲು  ಬರುವುದು 5 ಗಂಟೆ ತಡವಾದ ಹಿನ್ನೆಲೆ ಸುಮಾರು 500ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಮಿಸ್​​ ಮಾಡಿಕೊಂಡಿದ್ದಾರೆ. ಇಂದು BWSSBಯ ವಿವಿಧ ಹುದ್ದೆಗಳಿಗೆ ಪರೀಕ್ಷೆ ಕರೆಯಲಾಗಿತ್ತು. ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಜ್ಞಾನ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆ ಬರೆಯಲು ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಜಮಖಂಡಿ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಅಭ್ಯರ್ಥಿಗಳು ರಾಣಿ ಚನ್ನಮ್ಮ ರೈಲಿನಲ್ಲಿ ಬಂದಿದ್ದಾರೆ. ಆದ್ರೆ ರೈಲು ಬೆಂಗಳೂರು ತಲುಪುವುದು 5 ಗಂಟೆ ವಿಳಂಬವಾಗಿದೆ. ಬೆಳಿಗ್ಗೆ 6.18ಕ್ಕೆ ಯಶವಂತಪುರ ನಿಲ್ದಾಣಕ್ಕೆ ಬರಬೇಕಿದ್ದ ರೈಲು 11.45 ಕ್ಕೆ ಬಂದಿದೆ. ಹೀಗಾಗಿ ಸುಮಾರು 500ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಮಿಸ್ ಮಾಡಿಕೊಂಡಿದ್ದಾರೆ.

ಇದರಿಂದ ಈಗ ಅಭ್ಯರ್ಥಿಗಳು ಕಂಗಾಲಾಗಿದ್ದು, ತಪ್ಪು ನಮ್ಮದಲ್ಲ ನಮಗೆ ಪರೀಕ್ಷೆ ಬರೆಯಲು ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎನ್ನುತ್ತಿದ್ದಾರೆ. ಸದ್ಯ ಅಭ್ಯರ್ಥಿಗಳು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇದ್ದಾರೆ. ಪ್ರತಿಭಟನೆಗೆ ಅವಕಾಶ ಕೊಡದ ರೈಲ್ವೆ ಪೊಲೀಸರು ಎಲ್ಲರಿಂದ ಹಾಲ್ ಟಿಕೆಟ್ ಪಡೆಯುತ್ತಿದ್ದಾರೆ.