‘ಮೋದಿ ನಡೆಯಿಂದ ಐಎಎಫ್​ ಪೈಲಟ್​ಗಳ ಜೀವಕ್ಕೇ ಕುತ್ತು’

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಾದ ಒಪ್ಪಂದಗಳನ್ನ ಮತ್ತೆ ಬದಲಾಯಿಸಿದ ನರೇಂದ್ರ ಮೋದಿ ಸರ್ಕಾರದ ನಡೆಯಿಂದಾಗಿ ಭಾರತೀಯ ವಾಯುಪಡೆಯ ಪೈಲಟ್​ಗಳ ಜೀವಕ್ಕೆ ಅಪಾಯ ಎದುರಾಗಿದೆ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತೀಯ ಸೇನೆಯ ಪೈಲಟ್​ಗಳು ಪುರಾತನ ಯುದ್ಧ ವಿಮಾನಗಳಲ್ಲೇ ಹಾರಾಟ ನಡೆಸುವಂತಾಗಿದೆ ಎಂದು ರಾಹುಲ್ ಟೀಕಿಸಿದ್ರು.

ತಮ್ಮ ಆಪ್ತ ಹೂಡಿಕೆದಾರರಿಗೆ ನೆರವಾಗಲು 2014ರಿಂದಲೂ ಕೇಂದ್ರ ಸರ್ಕಾರ, ಯುಪಿಎ ಸರ್ಕಾರದ ಅವಧಿಯಲ್ಲಾದ ಒಪ್ಪಂದಗಳನ್ನ ಫೈನಲೈಸ್ ಮಾಡುವ ಬದಲು, ಅವುಗಳನ್ನ ಬದಲಾಯಿಸಲು ಮುಂದಾಗಿದ್ದಾರೆ. ಹೀಗಾಗಿ ನಮ್ಮ ವಾಯುಪಡೆ ಯೋಧರು ಪ್ರತಿ ದಿನ ತಮ್ಮ ಜೀವ ಕೈಲಿ ಹಿಡಿದು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ. ಫ್ರಾನ್ಸ್ ಮತ್ತು ಇತೆರೆಡೆಗಳಿಂದ ಕಳಪೆ ಗುಣಮಟ್ಟದ, ಗುಜರಿಗೆ ಹೋಗುವ ಸ್ಥಿತಿಯಲ್ಲಿರುವ ವಿಮಾನಗಳನ್ನ ತಂದು ನಮ್ಮ ಪೈಲಟ್​ಗಳಿಗೆ ನೀಡಲಾಗ್ತಿದೆ ಅಂತ ರಾಹುಲ್ ಆರೋಪಿಸಿದ್ದಾರೆ.

ರಫೇಲ್ ಯುದ್ಧ ವಿಮಾನದ ಡೀಲ್​ಗೆ ಸಂಬಂಧಿಸಿದಂತೆ ಭಾರೀ ಹಗರಣ ನಡೆದಿದೆ ಅಂತ ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ. ಈ ಬಗ್ಗೆ ರಾಹುಲ್ ಗಾಂಧಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಬಾರಿ ಹರಿಹಾಯ್ದಿದ್ದಾರೆ. ಇದೀಗ ಮತ್ತೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಾಹುಲ್ ಗಾಂಧಿ ರಫೇಲ್ ಡೀಲ್​ಗೆ ಸಂಬಂಧಿಸಿದಂತೆಯೇ ಪೋಸ್ಟ್ ಮಾಡಿದ್ದು, ಅದ್ರಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ, ಅದ್ರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಯಮಿ ಅನಿಲ್ ಅಂಬಾನಿ ಕೈಗೆ ಈಗ ರಫೇಲ್ ಒಪ್ಪಂದವನ್ನ ನೀಡಿದ್ದಾರೆ. ಅಂಬಾನಿ ಲಾಭಕ್ಕಾಗಿಯೇ ಈ ಡೀಲ್ ನಡೆದಿದೆ ಅಂತ ರಾಹುಲ್ ಆರೋಪಿಸಿದ್ದಾರೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv