ಪ್ರಧಾನಿಯ ಗೆಜ್ಜೆ ಏಟಿಗೆ, ಪ್ರಚಾರ ಮಂತ್ರಿ ಅಂತ ವಿರೋಧಿಗಳ ತಿರುಗೇಟು..!

ನವದೆಹಲಿ: ಪ್ರಧಾನಮಂತ್ರಿ ಕುರ್ಚಿಯನ್ನ ಅಲಂಕರಿಸೋದಕ್ಕೆ ಕೆಲವರು ಆಗಲೇ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ರೆಡಿಯಾಗಿದ್ದಾರೆ ಅಂತ ಪ್ರಧಾನಿ ನರೇಂದ್ರ ಮೋದಿ ತಮ್ಮ ಎದುರಾಳಿಗಳನ್ನ ಲೇವಡಿ ಮಾಡಿದ್ದಾರೆ. ವಿರೋಧ ಪಕ್ಷಗಳ ಹಲವು ನಾಯಕರು ಪ್ರಧಾನಮಂತ್ರಿ ರೇಸ್​ನಲ್ಲಿ ಇದ್ದಾರೆ. ಈ ಬಗ್ಗೆ ಲೇವಡಿ ಮಾಡಿರುವ ಪ್ರಧಾನಿ, ಇನ್ನೂ ದೇಶದ ಜನ ನಿರ್ಧಾರವೇ ಮಾಡಿಲ್ಲ. ಆಗಲೇ ಕೆಲವರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸಿದ್ಧವಾಗಿದ್ದಾರೆ ಅಂತ ಟಾಂಗ್ ಕೊಟ್ಟಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ಬಾಣ ಬಿಟ್ಟ ಪ್ರಧಾನಿ, ದಿನಕ್ಕೆ 10 ಬಾರಿ ಕನ್ನಡಿಯಲ್ಲಿ ನೋಡಿಕೊಳ್ಳುವವರು, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದ್ರೆ, ಅವರು ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದೇ ಒಂದು ವಿಧಾನಸಭೆ ಕ್ಷೇತ್ರದಲ್ಲೂ ಗೆಲ್ಲೋಕೆ ಸಾಧ್ಯವಾಗಿಲ್ಲ ಅಂತ ಕಾಲೆಳೆದಿದ್ದಾರೆ.

ಇನ್ನು, ಕೇಂದ್ರ ಸರ್ಕಾರದ ವಿರುದ್ಧ ಕೇಳಿ ಬರುತ್ತಿರುವ ಇವಿಎಂ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಮೋದಿ, 3 ಹಂತಗಳ ಚುನಾವಣೆಯಲ್ಲಿ ಟ್ರೆಂಡ್ ಬಿಜೆಪಿ ಪರ ಇದೆ ಅನ್ನೋದನ್ನ ಗಮನಿಸಿ ಇದೀಗ, ಇವಿಎಂನಲ್ಲಿ ದೋಷವಿದೆ ಅಂತ ಎದುರಾಳಿಗಳು ಹೊಸ ವರಾತ ತೆಗೆದಿದ್ದಾರೆ. ಇದು ಚಿಕ್ಕ ಮಕ್ಕಳು ಪರೀಕ್ಷೆಗಳಲ್ಲಿ ಸರಿಯಾಗಿ ಬರೆಯದಿದ್ದಾಗ, ತಪ್ಪಿಸಿಕೊಳ್ಳಲಿ ಕೊಡುವ ಕಾರಣಗಳಂತೆ ಇದೆ ಅಂತ ಲೇವಡಿ ಮಾಡಿದ್ದಾರೆ.

ಇನ್ನು, ಪ್ರಧಾನಿಯ ಹೇಳಿಕೆಗಳಿಗೆ ಎದುರಾಳಿಗಳೂ ತಿರುಗೇಟು ನೀಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್, ದೇಶಕ್ಕೆ ಬೇಕಿರೋದು ಪ್ರಧಾನಮಂತ್ರಿ, ಪ್ರಚಾರ ಮಂತ್ರಿಯಲ್ಲ ಅಂತ ಕಿಡಿಕಾರಿದ್ದಾರೆ. ಇನ್ನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡ, ಮೋದಿಯನ್ನ ಪ್ರಧಾನ ಪ್ರಚಾರ ಮಂತ್ರಿ ಅಂತ ಕಾಲೆಳೆದಿದ್ದಾರೆ.

ಇವತ್ತು ಬಂದೇಲ್​ಖಂಡ್​ನಲ್ಲಿ ಪ್ರಧಾನಿಯ ಚುನಾವಣಾ ಱಲಿ ಇದೆ. ಪ್ರಧಾನಿ ಬರ್ತಿದ್ದಾರೆ ಅಂತ ರಸ್ತೆಗಳನ್ನ ನೀರಿನ ಟ್ಯಾಂಕರ್​ಗಳಿಂದ ಕ್ಲೀನ್ ಮಾಡಲಾಗ್ತಿದೆ. ರಸ್ತೆಗಳನ್ನ ಸ್ವಚ್ಛಗೊಳಿಸುವುದಕ್ಕಾಗಿ, ನಮ್ಮ ಪ್ರಧಾನ ಪ್ರಚಾರ ಮಂತ್ರಿಯವರನ್ನ ಸ್ವಾಗತಿಸುವುದಕ್ಕಾಗಿ ಕುಡಿಯುವ ನೀರನ್ನ ಪೋಲು ಮಾಡ್ತಿದ್ದಾರೆ. ಇಲ್ಲಿನ ಜನ ಹನಿ ನೀರಿಗೂ ತತ್ತರಿಸುತ್ತಿರುವಾಗ ಇಷ್ಟು ನೀರು ಪೋಲು ಮಾಡು ಎಷ್ಟು ಸರಿ ಅಂತ ಪ್ರಿಯಾಂಕ ಪ್ರಶ್ನಿಸಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv