ನಾಳೆ ವಾರಣಾಸಿಯಲ್ಲಿ ಮೋದಿ ನಾಮಪತ್ರ, ಇಂದು ಬೃಹತ್ ರೋಡ್ ಶೋ

ವಾರಣಾಸಿ, ಉತ್ತರಪ್ರದೇಶ: ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಭಾರೀ ಕಸರತ್ತು ನಡೆಸ್ತಿದೆ. ಇನ್ನು, ಕಳೆದ ಬಾರಿ ಅದ್ಭುತ ಗೆಲುವು ಸಾಧಿಸಿದ್ದ ವಾರಣಾಸಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿಯೂ ವಾರಣಾಸಿಯಲ್ಲಿ ಮೋದಿ, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ನಾಳೆ ನರೇಂದ್ರ ಮೋದಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತಮ್ಮ ನಾಮಪತ್ರವನ್ನ ಸಲ್ಲಿಸಲಿದ್ದಾರೆ. ಇದಕ್ಕೂ ಮೊದಲು ವಾರಣಾಸಿಯಲ್ಲಿ ಮೋದಿ ಬೃಹತ್ ಱಲಿ ನಡೆಸಲಿದ್ದಾರೆ. ಎರಡು ದಿನಗಳ ವಾರಣಾಸಿ ಪ್ರವಾಸ ಕೈಗೊಳ್ಳಲಿರುವ ಮೋದಿ, ಇಂದು ತಮ್ಮ ಸ್ವಕ್ಷೇತ್ರಕ್ಕೆ ಬರಲಿದ್ದಾರೆ. ಇವತ್ತೇ ಬೃಹತ್ ರೋಡ್ ಶೋ ನಡೆಸಲಿರುವ ಮೋದಿ, ನಾಳೆ ಭಾರೀ ಮೆರವಣಿಗೆಯೊಂದಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇವತ್ತು ಮಧ್ಯಾಹ್ನ 12 ಗಂಟೆಗೆ ಮೋದಿ ವಾರಣಾಸಿಗೆ ಬರಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬೃಹತ್ ರೋಡ್ ಶೋ ನಡೆಯಲಿದೆ ಅಂತ ತಿಳಿಸಿದ್ದಾರೆ. ರೋಡ್ ಶೋಗೂ ಮೊದಲು ಬಿಜೆಪಿಯ ಹಿರಿಯ ನಾಯಕರ ಜೊತೆ ಮೋದಿ ಸಭೆ ನಡೆಸಲಿದ್ದಾರೆ. ಜೆ.ಪಿ. ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನಿಲ್ ಓಝಾ, ಆಶುತೋಶ್ ಟಂಡನ್ ಹಾಗೂ ಅಮಿತ್ ಶಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಲೋಕಸಭೆ ಚುನಾವಣೆಯ ತಯಾರಿಗಳ ಬಗ್ಗೆ ಚರ್ಚೆ ನಡೆಯಲಿದೆ.

ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಲಂಕಾ ಗೇಟ್ ಬಳಿ ಪಂಡಿತ್ ಮದನ್ ಮೋಹನ್ ಮಾಳವಿಯಾ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೋದಿ, ಅಲ್ಲಿಂದಲೇ ರೋಡ್ ಶೋ ಆರಂಭಿಸಲಿದ್ದಾರೆ. 7 ಕಿಲೋಮೀಟರ್ ದೂರದ ರೋಡ್ ಶೋ, ದಶಾಶ್ವಮೇಧ ಘಾಟ್​ನಲ್ಲಿ ಅಂತ್ಯಗೊಳ್ಳಲಿದೆ. ರೋಡ್ ಶೋ ವೇಳೆ ಸುಮಾರು 150 ಕಡೆಗಳಲ್ಲಿ ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಮೋದಿಯವರಿಗೆ ಸ್ವಾಗತ ಕೋರಲಿದ್ದಾರಂತೆ. ಸಂಜೆ 6.30ಕ್ಕೆ ದಾಶಶ್ವಮೇಧ ಘಾಟ್​ನಲ್ಲಿ ಮೋದಿ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv