ದಲಿತ, ಮುಸ್ಲಿಂರನ್ನು ರಾಷ್ಟ್ರಪತಿ-ಇಂದು ಒಬ್ಬ ಒಬಿಸಿ ವ್ಯಕ್ತಿಯನ್ನು ಪ್ರಧಾನಿ ಮಾಡಿದ್ದು ಬಿಜೆಪಿ..!

ಬಳ್ಳಾರಿ: ಕಳೆದೆರಡು ದಿನಗಳಿಂದ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದ ಅಂಗಳಕ್ಕಿಳಿದಿರುವ ಪ್ರಧಾನಿ ಮೋದಿ ಇಂದು ಬಳ್ಳಾರಿಯಲ್ಲಿ ಱಲಿ ನಡೆಸಿದ್ರು, ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ಸಾಧನೆಯನ್ನ ಬಿಂಬಿಸಿದ ಪ್ರಧಾನಿ ರಾಜ್ಯ ಸರ್ಕಾರವನ್ನು ಹಣಿದರು.

ಬಳ್ಳಾರಿಯನ್ನು ಕ್ಷೇತ್ರಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ

ಭಾಷಣದಲ್ಲಿ ಸಂಪದ್ಭರಿತ ವಿಜಯನಗರ ಇತಿಹಾಸವನ್ನು ನೆನದ ಪ್ರಧಾನಿ, ಇದು ರಾಮಭಕ್ತ ಹನುಮಂತನ ಜನ್ಮಸ್ಥಳ, ಶ್ರೀಕೃಷ್ಣದೇವರಾಯರಾಳಿದ ನಾಡು, ಜಗತ್ತಿಗೆ ಸಾಮರಸ್ಯ ಸಾರಿದ ನಾಡು ಇಂತಹ ಭೂಮಿಯನ್ನ ಕಾಂಗ್ರೆಸ್​ನವರು ಲೂಟಿಕೋರರ ನಾಡು ಎಂದು ಜಗತ್ತಿನಲ್ಲಿ ಚಿತ್ರಿಸಿ ಬಳ್ಳಾರಿಗೆ, ಬಳ್ಳಾರಿಯ ಜನತೆಗೆ ಅವಮಾನ ಮಾಡಿದ್ದರೆ. ಇಂತಹ ಸರ್ಕಾರಕ್ಕೆ ಶಿಕ್ಷೆ ನೀಡುವ ಸಮಯ ಬಂದಿದೆ. ಮೇ 12ರಂದು ಕಮಲದ ಚಿನ್ಹೆಯ ಬಟನ್ ಒತ್ತುವ ಮೂಲಕ ನೀವು ಕಾಂಗ್ರೆಸ್​ನ್ನು ಶಿಕ್ಷಿಸಿ ಎಂದು ಹೇಳಿದ್ರು. ವಿಜಯನಗರ ಸಾಮ್ರಾಜ್ಯ ಆಕ್ರಮಣಕಾರರ ವಿರುದ್ಧ, ಅತ್ಯಾಚಾರಿಗಳ ವಿರುದ್ಧ ಹೇಗೆ ಎದ್ದು ನಿಲ್ಲಬೇಕು ಎಂಬುದನ್ನು ಜಗತ್ತಿಗೆ ಸಾರಿದೆ. ಇಂತಹ ನಾಡಿನ ಇತಿಹಾಸ ಪರಿಚಯಿಸಲು ಕೇಂದ್ರ ಸರ್ಕಾರ ಹೊಸ 50 ರೂಪಾಯಿ ನೋಟಿನಲ್ಲಿ ಹಂಪಿಯ ಚಿತ್ರ ಮುದ್ರಿಸಿ ಈ ಭೂಮಿಗೆ ಗೌರವ ನೀಡಿದೆ ಎಂದು ಹೇಳಿದ್ರು.

ಸೋನಿಯಾರಿಂದ ಬಳ್ಳಾರಿಗೆ ಅನ್ಯಾಯ

ಈ ಹಿಂದೆ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸೋನಿಯಾ ಗಾಂಧಿ ಈ ಜಿಲ್ಲೆಗೆ ಸುಮಾರು ₹3 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿದ್ರು. ಕೊನೆಗೆ ಚುನಾವಣೆಯಲ್ಲಿ ಗೆದ್ದ ನಂತರ ಇತ್ತ ಕಡೆ ತಲೆಯೂ ಹಾಕಲಿಲ್ಲ, ತಾವು ಕೊಟ್ಟಿದ್ದ ಮಾತನ್ನ ಮರೆತರು ಅಂತ ಪ್ರಧಾನಿ ಲೇವಡಿ ಮಾಡಿದ್ರು. ಆದ್ರೆ ಕರ್ನಾಟಕದಲ್ಲಿ ನಮ್ಮ ಸರ್ಕಾರವಿದ್ದಾಗ ಬಳ್ಳಾರಿ ಅಭಿವೃದ್ಧಿಗಾಗಿ 2 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿತ್ತು. ಆ ಕಾಲದಲ್ಲಿಯೇ ಸೂಪರ್​ಸ್ಪೇಷಾಲಿಟಿ ಆಸ್ಪತ್ರೆ, ರಿಂಗ್​ರೋಡ್​ನಂತಹ ಯೋಜನೆಗಳನ್ನು ಕೈಗೊಳ್ಳಲು ಸಾಧ್ಯವಾಯ್ತು.

ಮಹಾರಾಷ್ಟ್ರ ಸರ್ಕಾರದ ಸಾಧನೆ ಹೊಗಳಿದ ಮೋದಿ

ಇನ್ನು ಡ್ಯಾಂಗಳ, ನದಿಗಳ ಹೂಳೆತ್ತುವ ಹಾಗೂ ಡಿಸೆಂಟಿಂಗ್​ ಕಾರ್ಯಗಳ ವಿಚಾರದಲ್ಲಿ ಪ್ರಧಾನಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರವನ್ನು ಹೊಗಳಿದರು. ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರ ಅಸ್ತಿತ್ವಕ್ಕೆ ಬಂದ 2 ವರ್ಷದ ನಂತರ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ನೀರು ಸಂರಕ್ಷಣೆಗಾಗಿ ಅಲ್ಲಿ ದೊಡ್ಡ ಜನಾಂದೋಲನವೇ ನಡೆದಿದೆ. ಒಂದು ವೇಳೆ ಮಹಾರಾಷ್ಟ್ರ ಸರ್ಕಾರ ಡ್ಯಾಂಗಳನ್ನು ಡಿಸೆಂಟ್​ ಮಾಡಿದ್ದನ್ನು ನೋಡಿ ಕರ್ನಾಟಕ ಸರ್ಕಾರ ಕಲಿತಿದ್ದರೆ, ತುಂಗಭದ್ರಾ ತಟದ ಜನ ನೀರಿಲ್ಲದೇ ಕಷ್ಟಪಡುವ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ಮೋದಿ ಆಕ್ರೋಶ ವ್ಯಕ್ತಪಡಿಸಿದ್ರು. ಮಹಾರಾಷ್ಟ್ರದಲ್ಲಿ ನಡೆದ ಡ್ಯಾಂಗಳ ಹೂಳೆತ್ತುವ ಕಾರ್ಯ ಕೇವಲ ಸರ್ಕಾರದಿಂದ ಸಾಧ್ಯವಾಗಿದ್ದಲ್ಲ, ಜನರು ಹಾಗೂ ಸರ್ಕಾರದ ಭಾಗಿತ್ವದಲ್ಲಿ ನಡೆದದ್ದರಿಂದ 6ಸಾವಿರ ಕೋಟಿ ರೂಪಾಯಿ ಖರ್ಚಿನ ಈ ಯೋಜನೆ 12 ಸಾವಿರ ಕೋಟಿ ರೂಪಾಯಿ ಲಾಭ ತಂದುಕೊಟ್ಟಿದೆ ಎಂದು ಹೇಳಿದ್ರು. ಈಗ ಚುನಾವಣೆ ಬಂದ ನಂತರ ಚೆಕ್​ಡ್ಯಾಂ ನಿರ್ಮಿಸಲು ಈ ನಿದ್ದೆಯ ಸರ್ಕಾರ ಎದ್ದು ಕುಳಿತಿದೆ ಎಂದು ಟೀಕಿಸಿದ್ರು.

ಕಾಂಗ್ರೆಸ್​ನಿಂದ ವೋಟ್​ ಬ್ಯಾಂಕ್ ರಾಜಕಾರಣ
ಕಾಂಗ್ರೆಸ್​ ಮೊದಲಿನಿಂದಲು ವೋಟ್​ಬ್ಯಾಂಕ್​ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್​ ದಲಿತರ ಹಾಗೂ ಆದಿವಾಸಿಗಳ ವಿರೋಧಿ ಪಕ್ಷ ಈ ಹಿಂದೆ ಈ ಹಿಂದೆ ಕರ್ನಾಟಕದಲ್ಲಿ ಖರ್ಗೆಯವರು ಮುಖ್ಯಮಂತ್ರಿಯಾಗುತ್ತಾರೆ, ಎಂದು ವೋಟ್​ ಪಡೆದಿದ್ದ ಕಾಂಗ್ರೆಸ್​ ಚುನಾವಣೆಯ ನಂತರ ಗುಪ್ತ ಮತದಾನ ಎಂದು ಹೇಳಿ ಅವರನ್ನು ಮೂಲೆಗುಂಪು ಮಾಡಿದರು. ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪನವರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ಕರ್ನಾಟಕ ಮರೆತಿಲ್ಲ ಅಂತಾ ಮೋದಿ ಹೇಳಿದ್ರು ಇನ್ನು ಈ ರಾಜ್ಯದ ಮುಖ್ಯಮಂತ್ರಿ 8 ಕೆರೆ ನೀರು ಕುಡಿದವರು ಒಮ್ಮೆ ಜನತಾದಳ ಇನ್ನೊಮ್ಮೆ ದಲಿತ ದಳ ಅಂತ ದಳದ ಹಿಂದೆ ವಲಸೆ ಹೋಗುತ್ತಾರೆ ವ್ಯಂಗ್ಯವಾಡಿದ್ರು.

ಆರೋಪಗಳಿಗೆ ಬಿಜೆಪಿ ತಕ್ಕ ಉತ್ತರ ನೀಡಿದೆ
ಇನ್ನು ಬಿಜೆಪಿಯೆಂದರೇ ವ್ಯಾಪಾರಿಗಳ ಬ್ರಾಹ್ಮಣರ ಪಕ್ಷ ಎಂಬ ಭಾವನೆಯನ್ನು ಕಾಂಗ್ರೆಸ್ ಜನರಲ್ಲಿ ಬಿತ್ತಿತ್ತು. ಅಬ್ದುಲ್ ಕಲಾಂರಂತ ಭಾರತದ ಶ್ರೇಷ್ಠ ಸಂತಾನವನ್ನು ರಾಷ್ಟ್ಟಪತಿ ಸ್ಥಾನಕ್ಕೆ ಕೂರಿಸಿದ್ದು ಇದೇ ಬಿಜೆಪಿ ಸರ್ಕಾರ. ಒಬ್ಬ ಚಾಯವಾಲಾ-ಒಬಿಸಿ ಇಂದು ಪ್ರಧಾನಿಯನ್ನಾಗಿಸಿದ್ದು ಇದೇ ಬಿಜೆಪಿ ಎಂದು ಹೇಳಿದ್ರು. ನಮ್ಮನ್ನು ದಕ್ಷಿಣ ಭಾರತದ ವಿರೋಧಿಗಳು ದಲಿತ ವಿರೋಧಿಗಳು ಎಂದು ಹೇಳಲಾಗ್ತಿತ್ತು. ಆದ್ರೆ ಒಬ್ಬ ದಲಿತ ಹಾಗೂ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯನ್ನು ರಾಷ್ಟ್ರಪತಿಯಂತಹ ಉನ್ನತ ಸ್ಥಾನಕ್ಕೆ ತಂದು ಕೂರಿಸಿದ್ದೇವೆ. ದಕ್ಷಿಣ ಭಾರತದ ವೆಂಕಯ್ಯ ನಾಯ್ಡುರನ್ನು ಉಪರಾಷ್ಟ್ರಪತಿ ಮಾಡಿದ್ದೇವೆ. ನಮ್ಮನ್ನು ಸ್ತ್ರೀ ವಿರೋಧಿ ಎನ್ನುತ್ತಿದ್ದ ಪಕ್ಷಗಳು ನಿರ್ಮಲಾ ಸೀತಾರಾಮನ್ ದೇಶದ ಮೊದಲ ಮಹಿಳಾ ರಕ್ಷಣಾ ಮಂತ್ರಿಯಾಗಿ ಘೋಷಿಸಿದ ಮೇಲೆ ದಂಗಾಗಿ ಹೋಗಿದ್ದಾರೆ ಎಂದು ಹೇಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv