ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಸಭೆಯಲ್ಲಿ ಮೊಬೈಲ್​ಗಳದ್ದೇ ಹವಾ..!

ರಾಯಚೂರು: ರಾಯಚೂರು ಕೃಷಿ ವಿವಿಯ ಆಡಿಟೋರಿಯಂ ನಲ್ಲಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನಡೆಸಿರುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಗತಿಗಳ ಬಗ್ಗೆ ಚರ್ಚೆಗಿಂತ ಮೊಬೈಲ್​ಗಳ ಕಾರುಬಾರು ಜೋರಾಗಿತ್ತು. ನಗರಾಭಿವೃದ್ಧಿ ಇಲಾಖೆಯಿಂದ ಗುಲ್ಬರ್ಗ ವಿಭಾಗದ ರಾಯಚೂರು, ಗುಲ್ಬರ್ಗ, ಬಳ್ಳಾರಿ, ಕೊಪ್ಪಳ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಯನ್ನು ನೂತನ ಪೌರಾಡಳಿತ ಸಚಿವರಾದ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಸಲಾಯಿತು.

ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ರು. ಅಷ್ಟೇ ಅಲ್ಲದೆ ಕೆಲ ಜಿಲ್ಲೆಗಳ ಶಾಸಕರು, ಸಂಸದರು ಉಪಸ್ಥಿತರಿದ್ರು. ಒಂದೆಡೆ ಸಚಿವರು, ಜಿಲ್ಲಾಧಿಕಾರಿಗಳು ಕಾಮಗಾರಿಗಳ ಪ್ರಗತಿ ಬಗ್ಗೆ ಚರ್ಚೆ ನಡೆಸುತ್ತಿದ್ರೆ, ಇತ್ತ ನಮಗೂ ಅದಕ್ಕೂ ಸಂಬಂಧವೆ ಇಲ್ಲವೆಂಬತೆ ಕೆಲ ಅಧಿಕಾರಿಗಳು, ಜನಪ್ರತಿನಿಧಿಗಳು ಮೊಬೈಲ್ ಫೋನ್ ಬಳಕೆಯಲ್ಲೇ ಬ್ಯುಸಿಯಾಗಿದ್ರು. ಸಚಿವರ ಪಕ್ಕದಲ್ಲೆ ವೇದಿಕೆಯಲ್ಲಿ ಕುಳಿತಿದ್ದ ರಾಯಚೂರು ಸಂಸದ ಬಿವಿ ನಾಯಕ್, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮೊಬೈಲ್​ನಲ್ಲಿ ಮಾತಾಡುವುದರಲ್ಲೆ ತಲ್ಲಿನರಾಗಿದ್ರೆ, ಅತ್ತ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚೆಸ್ ಗೇಮ್ ಆಡುವುದರಲ್ಲಿ ಬ್ಯೂಸಿಯಾಗಿದ್ರು. ಮತ್ತೊಂದೆಡೆ ಕೆಲ ಅಧಿಕಾರಿಗಳು ಮೊಬೈಲ್ ಬಳಕೆಯಲ್ಲೆ ಕಾಲ ಕಳೆಯುತ್ತಿದ್ದರು.
ಇಷ್ಟಾದ್ರು ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆರು ಜಿಲ್ಲೆಗಳಲ್ಲಿ ಕೈಗೊಂಡಿರುವ 24×7 ಕುಡಿಯುವ ನೀರಿನ ಪ್ರಾಜೆಕ್ಟ್‌ ಹಾಗೂ ಒಳಚರಂಡಿ ಕಾಮಗಾರಿ ಪ್ರಗತಿ ಕಾಣದೆ ಇರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಕೋಟಿ ಕೋಟಿ ವೆಚ್ಚದ ಕಾಮಗಾರಿಯ ಗುತ್ತಿಗೆ ಪಡೆದಿರುವ ದೆಹಲಿ ಮೂಲದ SMPL Infr ಕಂಪನಿ ವಿರುದ್ಧ ರಾಯಚೂರು ನಗರಸಭೆ ಉಪಾಧ್ಯಕ್ಷ ಜಯಣ್ಣ ವಾಗ್ದಾಳಿ ನಡೆಸಿದ್ರು. 2015ರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಂಪನಿ 2017 ರಲ್ಲಿ ಕಾಮಗಾರಿ ಮುಗಿಸಬೇಕಿತ್ತು ಆದ್ರೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಕಾಮಗಾರಿ ಮುಗಿಸಲು ಹೆಚ್ಚಿನ ಅವಧಿ ನೀಡಿದ್ರೂ ಕಂಪನಿ ಮಾತ್ರ ಕಾಮಗಾರಿಯನ್ನು ಮಂದಗತಿಯಲ್ಲೇ ನಡೆಸುತ್ತಿರುವ ಕಾರಣ ಜಿಲ್ಲಾಧಿಕಾರಿಗಳು ಕಂಪನಿಯ ಪ್ರಾಜೆಕ್ಟ್‌ ಮ್ಯಾನೇಜರ್ ಪಂಕಜ್ ಕುಮಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವು ಬಾರಿ ಕಂಪನಿಯ ಎಂಜಿನಿಯರ್​ಗಳ ಜತೆ ಸಭೆ ನಡೆಸಿದ್ರೂ, ಬೇಜವಾಬ್ದಾರಿತನ ತೋರುತ್ತಿದ್ದಾರೆ ಅಂತಾ ಜಿಲ್ಲಾಧಿಕಾರಿ ಗೌತಮ್ ಬಗಾದಿ ಸಚಿವರ ಮುಂದೆ ಅಸಹಾಯಕತೆ ತೋಡಿಕೊಂಡ್ರು.

ಇನ್ನು ಸಭೆ ನಡೆಸುತ್ತ ಮಾಧ್ಯಮದೊಂದಿಗೆ ಮಾತಾಡಿರುವ ಸಚಿವರು ಇನ್ನೂ ಬೇರೆ ಕಡೆಗಳಲ್ಲಿಯೂ ಇದೇ ರೀತಿ ಪ್ರಗತಿ ಪರಿಶೀಲನೆ ನಡೆಸಿ, ಕಾಮಗಾರಿ ಗುತ್ತಿಗೆ ಪಡೆದು ಇನ್ ಟೈಮ್​ನಲ್ಲಿ ಪೂರ್ಣ ಗೊಳಿಸದೇ ಉದಾಸೀನ ಮಾಡುತ್ತಿರುವ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದೆಂದು ಕಾಂಟ್ರಾಕ್ಟ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಇಂದು ಸಚಿವರ ಸಮ್ಮುಖದಲ್ಲಿ ನಡೆದ ನಗರಾಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮೊಬೈಲ್​ಗಳದ್ದೇ ಕಾರುಬಾರು ಜೋರಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv