ಎಂಡೋಸಲ್ಫಾನ್ ಪೀಡಿತರ ಆರೋಗ್ಯಕ್ಕಾಗಿ 4 ಸಂಚಾರಿ ವಾಹನಗಳು

ಕಾರವಾರ: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ಪ್ರದೇಶದಲ್ಲಿ ಕಂಡುಬರುತ್ತಿರುವ ವಿಚಿತ್ರ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ವಿನೂತನ ಸಂಚಾರಿ ಆರೋಗ್ಯ ಘಟಕ ಒಂದನ್ನು ರೂಪಿಸಲಾಗಿದೆ. ಈ ಆರೋಗ್ಯ ಘಟಕವನ್ನು ಮಂಗಳವಾರ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕಕುಮಾರ್ ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯ ಹೈಕೋರ್ಟ್ ಆದೇಶದಂತೆ ಪುನರ್ವಸತಿ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ಎಂಡೋಸಲ್ಫಾನ್ ಪೀಡಿತರಿಗಾಗಿ ಸಂಚಾರಿ ಆರೋಗ್ಯ ಘಟಕವನ್ನು ಕಾರ್ಯಾಚರಣೆಗೆ ಬಿಡಲಿದೆ ಎಂದರು.

ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ, ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಬರುವ 205 ಗ್ರಾಮಗಳಲ್ಲಿ ಸುಮಾರು 2,000 ಕ್ಕೂ ಹೆಚ್ಚು ಎಂಡೋಸಲ್ಫಾನ್​ ಪೀಡಿತರಿದ್ದಾರೆ.
ಎಂಡೋಸಲ್ಫಾನ್ ಪೀಡಿತರಲ್ಲಿ ದೈಹಿಕ ವಿಕಲತೆ ಹೆಚ್ಚಾಗಿರುವುದರಿಂದ ವೈದ್ಯಕೀಯ ಸೇವೆಗಿಂತ ಫಿಜಿಯೋಥೆರಫಿ ಸೇವೆ ಹೆಚ್ಚಾಗಿ ಅವಶ್ಯವಿದೆ.

ಈ ಸೇವೆಗೆ ಅನುಕೂಲವಾಗುವಂತಹ ಯಂತ್ರೋಪಕರಣಗಳನ್ನು ಅಳವಡಿಸಿ ರೂಪಿಸಿರುವ ಸಂಚಾರಿ ಅರೋಗ್ಯ ಘಟಕ ನಾಳೆ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆ ಆಗಲಿದೆ. ಜಿಲ್ಲೆಯ ಒಟ್ಟು ಆರು ತಾಲೂಕುಗಳಲ್ಲಿ ನಾಲ್ಕು ಸಂಚಾರಿ ಘಟಕಗಳು ಕಾರ್ಯನಿರ್ವಹಿಸುತ್ತವೆ ಎಂದು ಡಾ. ಅಶೋಕಕುಮಾರ್ ತಿಳಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv