ಕಾಂಗ್ರೆಸ್​​ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರು ಗರಂ

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್​​ ಪಕ್ಷದ ಶಾಸಕಾಂಗ ಸಭೆಯಲ್ಲಿ ಅತೃಪ್ತ ಶಾಸಕರು ಸಂಪುಟ ವಿಸ್ತರಣೆಗೆ ಪಟ್ಟುಹಿಡಿದಿದ್ದು, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುವಂತೆ ಆಕಾಂಕ್ಷಿಗಳು ಒತ್ತಡ ಹಾಕಿದ್ದಾರೆ. ರೈತರ ಸಾಲ ಮನ್ನಾ ಬೋಗಸ್ ಸಾಲಮನ್ನಾ ಅಂತಾ ಜನ ಮಾತಾಡ್ತಿದ್ದಾರೆ. ಆದ್ರೆ ನೀವು ಮಂಡಿಸಿದ ಬಜೆಟ್ ಕಥೆ ಏನು? ಅಂತಾ ಮಾಜಿ ಸಚಿವ ಹೆಚ್​.ಕೆ. ಪಾಟೀಲ್​ ನಾಯಕರನ್ನ ಪ್ರಶ್ನಿಸಿದ್ದಾರೆ.

ಬರೀ ಸುಸ್ತಿದಾರರ ಬೆಳೆ ಸಾಲ ಮನ್ನಾ ಅಂದ್ರೆ ಯಾವ ರೈತರಿಗೆ ಲಾಭ ಆಗುತ್ತೆ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಭಾಗದಲ್ಲಂತೂ‌ ಯಾರಿಗೂ ಸಾಲಮನ್ನಾ ಲಾಭ ಸಿಗಲ್ಲ. ಎಲ್ಲ ಹಾಸನ, ರಾಮನಗರ, ಮಂಡ್ಯಗೆ ಕೊಟ್ಟುಬಿಡೋಕೆ ಹೇಳಿಬಿಡಿ. ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲ ಡಾ.ಜಿ. ಪರಮೇಶ್ವರ್​ ಓಕೆ ಅಂತಿದ್ದಾರೆ. ಇದರ ಪರಿಣಾಮ ಏನಾಗ್ತಿದೆ ಗೊತ್ತಾ ನಿಮಗೆ? ಕಾಂಗ್ರೆಸ್​ ನಿಲುವುಗಳಿಗೆ ಜೆಡಿಎಸ್ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದು ಹೆಚ್.ಕೆ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕಾಂಗ್ರೆಸ್​ನ ಮಹತ್ವಪೂರ್ಣ ಯೋಜನೆ ಅನ್ನಭಾಗ್ಯದಲ್ಲಿ ತಲಾ 7 ಕೆ.ಜಿ ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ, ಬಜೆಟ್​ನಲ್ಲಿ 2 ಕೆ.ಜಿ ಕಡಿತ ಮಾಡಲಾಗಿದೆ. ಯಾಕೆ ಹೀಗೆ ಆಯಿತು? ಎಂದು ಕೆಲ ಶಾಸಕರು ಪ್ರಶ್ನಿಸಿದರು. ನಾವು ಕೇಂದ್ರ ಸರ್ಕಾರದ ವಿರುದ್ಧ ಡೀಸೆಲ್‌, ಪೆಟ್ರೋಲ್ ಬೆಲೆ ಹೆಚ್ಚಳದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈಗ ನೋಡಿದ್ರೆ ತೆರಿಗೆ ವಿಧಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ನಾವು ಏನು ಉತ್ತರ ಕೊಡಬೇಕು? ಎಂದು ಶಾಸಕರು ಪ್ರಶ್ನಿಸಿದರು. ಬಜೆಟ್ ಬಿಲ್​ಪಾಸ್ ಆಗುವುದರ ಒಳಗಾಗಿ ಈ ಸಮಸ್ಯೆಯನ್ನ ಸರಿಪಡಿಸಿ ಎಂದು ಒಕ್ಕೊರಲಿನಿಂದ ಶಾಸಕರು ಸಭೆಯಲ್ಲಿ ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv