ನಾವು ಹೊಡದ್ರೆ ಹೊಡಿಸ್ಕೋತಾ ಇರ್ಬೇಕ್, ನಾವು ಸಚಿವರ ಬೆಂಬಲಿಗರು..!

ಮೈಸೂರು: ಬಾರ್​​ವೊಂದರಲ್ಲಿ ಸಚಿವ ಸಾ.ರಾ. ಮಹೇಶ್ ಬೆಂಬಲಿಗರು ಪುಂಡಾಟ ನಡೆಸಿದ್ದಾರೆ. ಜಿಲ್ಲೆಯ ಕೆ.ಆರ್. ನಗರದಲ್ಲಿರುವ ಸಾ.ರಾ. ಮಹೇಶ್ ಸೋದರನ ಒಡೆತನಕ್ಕೆ ಸೇರಿದ ಎಸ್.ಜಿ.ಆರ್. ರೆಸಿಡೆನ್ಸಿಯಲ್ಲಿರುವ ಬಾರ್​ನಲ್ಲಿ ಪುಂಡರು ದಾಂಧಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಿರ್ಲೆ ಗ್ರಾಮದ ಚೇತನ್, ತೇಜಸ್, ಅರುಣ್ ಕುಮಾರ್ ಸೇರಿದಂತೆ 10 ಮಂದಿಯ ಗುಂಪು ಪುಂಡಾಟ ನಡೆಸಿದೆ.

ಪುಂಡರು ನಿನ್ನೆ ಮಧ್ಯಾಹ್ನದಿಂದಲೇ ಕುಡಿದು ರಾತ್ರಿ ತನಕ ರಂಪಾಟ ನಡೆಸಿದ್ದು, ಯುವಕನೊಬ್ಬನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಮಹೇಶ್ ನಾಯಕ್ ಎಂಬುವವರ ಮೇಲೆ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ್ದಾರೆ.

ಇದೇ ರೀತಿ ಹಲವರ ಮೇಲೆ ಹಲ್ಲೆ ಮಾಡಿದರೂ ಬಾರ್ ಮ್ಯಾನೇಜರ್ ಮಾತ್ರ ಆ ಪುಂಡರನ್ನು ನಿಯಂತ್ರಿಸಲಿಲ್ಲ ಅಂತ ಆರೋಪಿಸಲಾಗಿದೆ. ಅಲ್ಲದೇ ಪುಂಡಾಟ ಮಾಡಿದವರು ಸಾ.ರಾ. ಮಹೇಶ್ ಬೆಂಬಲುಗರೆಂಬ‌ ಕಾರಣಕ್ಕೆ ಅವರ ವಿರುದ್ಧ ಮ್ಯಾನೇಜರ್ ದೂರು ಕೊಟ್ಟಿಲ್ಲ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ಮಹೇಶ್ ನಾಯಕ್ ಅವರನ್ನು ಕೆ.ಆರ್. ನಗರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಗಾಯಾಳು ಮಹೇಶ್​ ನಾಯಕ್​ರ ಹೇಳಿಕೆಯನ್ನ ದಾಖಲಿಸಿಕೊಂಡರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಕೆ.ಆರ್. ನಗರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv