‘ಆಪರೇಷನ್​ ಕಮಲ’ ವಿಫಲ; ಕಾದುನೋಡುವ ತಂತ್ರದ ಮೊರೆ ಹೋದ್ರಾ ರಮೇಶ್​ ಜಾರಕಿಹೊಳಿ..?

ಬೆಂಗಳೂರು: ಗೋಕಾಕ್​​ ಕ್ಷೇತ್ರದ ಅತೃಪ್ತ ಕಾಂಗ್ರೆಸ್​​ ಶಾಸಕ ರಮೇಶ್​​ ಜಾರಕಿಹೊಳಿ ನಾಳೆ ಕ್ಷೇತ್ರದತ್ತ ಮುಖ ಮಾಡಲಿದ್ದಾರೆ. ಈ ಮೂಲಕ ಮುಂದಿನ ರಾಜಕೀಯ ಬೆಳವಣಿಗೆಯನ್ನ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸ್ಥಾನದಿಂದ ಕೈಬಿಟ್ಟ ಬಳಿಕ ಕಾಂಗ್ರೆಸ್​ ನಾಯಕರ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ರಮೇಶ್​ ಜಾರಕಿಹೊಳಿ ಅಂತರ ಕಾಯ್ದುಕೊಂಡಿದ್ದಾರೆ. ಇತ್ತ, ಬಿಜೆಪಿ ಆಪರೇಷನ್ ಕಮಲ ನಡೆಸಿ ರಮೇಶ್​ ಜಾರಕಿಹೊಳಿ ಟೀಂ ಅನ್ನ ಸೆಳೆಯಲು ಪ್ರಯತ್ನಿಸುತ್ತಿದೆ ಅನ್ನೋ ವದಂತಿ ಕೂಡ ಹಬ್ಬಿತ್ತು. ಇದಕ್ಕೆ ಪೂರಕವೆಂಬಂತೆ ರಮೇಶ್ ಜಾರಕಿಹೊಳಿ ಟೀಂ ಕೆಲ ದಿನಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿತ್ತು. ಇದರಿಂದಾಗಿ ಸಮ್ಮಿಶ್ರ ಸರ್ಕಾರಕ್ಕೆ ಭದ್ರತೆಯ ಆತಂಕ ಕೂಡ ಕಾಡಿತ್ತು. ಈಗ ಆಪರೇಷನ್ ಕಮಲ ವಿಫಲ ಆಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಆ್ಯಂಡ್ ಟೀಂ ಮುಂಬೈನಿಂದ ಬೆಂಗಳೂರಿಗೆ ಬಂದಿದೆ. ಆದರೆ ಅವರ ಮುಂದಿನ ನಡೆ ಏನು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇವತ್ತು ಮಹತ್ವದ ಬೆಳವಣಿಗೆ ಒಂದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದಾರೆ. ಆದರೆ ಭೇಟಿ ವೇಳೆ ಏನೆಲ್ಲಾ ಚರ್ಚೆಗಳು ನಡೆದಿವೆ ಅನ್ನೋದರ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಇದರ ನಡುವೆ ನಾಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ.

ಬೆಳಗಾವಿಯಲ್ಲಿ ಸಚಿವ ಡಿ.ಕೆ. ಶಿವಕುಮಾರ್​​ ಹಸ್ತಕ್ಷೇಪ ಮತ್ತು ಕೆಪಿಸಿಸಿ ಘಟಕ ಮಹಿಳಾ ಅಧ್ಯಕ್ಷ ಲಕ್ಷ್ಮೀ ಹೆಬ್ಬಾಳ್ಕರ್​ ನಡುವಿನ ಅಸಮಾಧಾನದಿಂದ ಒಂದು ತಿಂಗಳು ಕ್ಷೇತ್ರದ ಸಂಪರ್ಕ ಕಳೆದುಕೊಂಡ ಜಾರಕಿಹೊಳಿ ಮುನಿಸಿಕೊಂಡಿದ್ದರು. ಅಸಮಾಧಾನದ ಕುರಿತಾಗಿ ಮಾತುಕತೆ ನಡೆಸಲು ಪಕ್ಷದ ವರಿಷ್ಠರು ಅನುಮತಿ ನೀಡಿದ್ದರೂ, ಅತೃಪ್ತ ಶಾಸಕರ ನೇತೃತ್ವವಹಿಸಿ ಮುಂಬೈನಲ್ಲಿ ರಮೇಶ್​​ ಜಾರಕಿಹೊಳಿ ಉಳಿದಿದ್ದರು. ಹೀಗಾಗಿ ಶಾಸಕಾಂಗ ಪಕ್ಷದ ಸಭೆ  ಹಾಗೂ ಅಧಿವೇಶನಕ್ಕೆ ಹಾಜರಾಗದೇ ದೂರ ಉಳಿದಿದ್ದರು.

ಶಾಸಕ ರಮೇಶ್​​ ಜಾರಕಿಹೊಳಿ ಗೈರು ಆಗುತ್ತಿರುವುದಿಂದ ಪಕ್ಷದ ನಾಯಕರು ನೋಟಿಸ್​ ನೀಡಿದ್ದರು. ಇದಕ್ಕೂ ಕ್ಯಾರೆ ಎನ್ನದೇ ರಮೇಶ್​ ಸುಮ್ಮನಿದ್ದರು. ಆದರೆ, ಬಿಜೆಪಿ ಆಪರೇಷನ್​ ಕಮಲ ವಿಫಲ ಆಗುತ್ತಿದ್ದಂತೆ ಒಬ್ಬಬ್ಬರಾಗಿ ನಾಲ್ಕು ಅತೃಪ್ತ ಶಾಸಕರು ಬಜೆಟ್​ ಅಧಿವೇಶನಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದರು. ಧನ‌ ವಿನಿಯೋಗ ವಿಧೇಯಕ ಮಂಡನೆಯ ವೇಳೆ ಸದನಕ್ಕೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ಬೀಸೋ ದೊಣ್ಣೆಯಿಂದ ಅಧಿವೇಶನಕ್ಕೆ ಹಾಜರಾದ ರಮೇಶ್​ ಜಾರಕಿಹೊಳಿ ನಡೆ ತೀವ್ರ ಕುತೂಹಲ ಮೂಡಿಸಿದೆ. ಕ್ಷೇತ್ರದತ್ತ ಮುಖಮಾಡುತ್ತಿರುವ ರಮೇಶ್​ ಜಾರಕಿಹೊಳಿ ಈಗ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv