‘ಸುಳ್ಳು ಹೇಳುವ ಸಿಎಂ ಕುಮಾರಸ್ವಾಮಿಗೆ ನೊಬೆಲ್​ ಪ್ರಶಸ್ತಿ ಕೊಡಬೇಕು’ -ಈಶ್ವರಪ್ಪ

ದಾವಣಗೆರೆ: ರಾಜ್ಯ ಸರ್ಕಾರದಿಂದ ಬೆಳಗಾವಿಯಲ್ಲಿ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ನಾಮ್​ ಕಾ ವಸ್ತೆ ಎಂದು ಶಾಸಕ ಕೆ.ಎಸ್​. ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರಾಜ್ಯದ ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಸದನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚಿಸಲು ಅವಕಾಶ ನೀಡಿಲ್ಲ. ಅಲ್ಲದೇ, ಕಬ್ಬು ಬೆಳೆಗಾರರ ಬಗ್ಗೆ ಸರ್ಕಾರದ ಸ್ಪಷ್ಟ ನಿಲುವು ಇಲ್ಲ. ಹೀಗಾಗಿ ಇದೊಂದು ವ್ಯರ್ಥವಾದ ಅಧಿವೇಶನ ಎಂದು ಈಶ್ವರಪ್ಪ ಸರ್ಕಾರದ ವಿರುದ್ಧ ಗುಡುಗಿದರು.

ಇನ್ನು, ರೈತರ ಸಾಲಮನ್ನಾ ವಿಚಾರದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಸಾಲಮನ್ನಾ ಮಾಡದಂತೆ ವಿರೋಧ ಪಕ್ಷ ನೋಡುತ್ತಿದೆ ಎಂಬ ಸರ್ಕಾರದ ಹೇಳಿಕೆ ಹಾಸ್ಯಾಸ್ಪದ. ಎಷ್ಟು ದಿನ ಸರ್ಕಾರ ಇರುತ್ತೆ ಗೊತ್ತಿಲ್ಲ. ನೀವು ಘೋಷಣೆ ಮಾಡಿದ್ದು ರೈತರಲ್ಲಿ ವಿಶ್ವಾಸ ಮೂಡಿಸುವಂತಾಗಲಿ ಎಂದು ಈಶ್ವರಪ್ಪ ಹೇಳಿದರು.
ಇನ್ನು, ಬಿಜೆಪಿ ತಂಡದಿಂದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ಮಾಡಲಾಗುತ್ತಿದೆ. ಬರ ಪ್ರದೇಶಗಳಲ್ಲಿ ಕುಡಿಯಲು ನೀರಿಲ್ಲ, ಬೆಳೆ ನಾಶವಾಗಿದೆ, ಜಾನುವಾರಗಳಿಗೆ ಮೇವಿಲ್ಲ. ಇದರಿಂದಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವಂತ ಸ್ಥಿತಿ ಎದುರಾಗಿದೆ. ಸಮ್ಮಿಶ್ರ ಸರ್ಕಾರದ ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವ ಕೂಡ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಜೆಡಿಎಸ್- ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಕೇವಲ ಘೋಷಣೆಗಳನ್ನು ಮಾತ್ರ ಮಾಡುತ್ತಿದೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಿಎಂ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ನೊಬೆಲ್​ ಪ್ರಶಸ್ತಿ ಕೊಡಬೇಕೆಂದು ಈಶ್ವರಪ್ಪ ವ್ಯಂಗ್ಯ ಮಾಡಿದರು.