ಎಕ್ಸರೇ ಕಣ್ಣಿಂದ ನೋಡಿದ್ರೆ.. ಹೀಗೆಯೇ ಕಾಣುತ್ತೆ: ಸಚಿವ ನಾಡಗೌಡ

ಚಿತ್ರದುರ್ಗ: ಮಾಧ್ಯಮಗಳು ಟಿಆರ್​ಪಿಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಸಂಭಾಷಣೆಯನ್ನು ಎಡಿಟ್ ಮಾಡಿ ತೋರಿಸಿವೆ. ಮಾಧ್ಯಮದವರು ಹಾಕಿಕೊಂಡಿರುವ ಚೆಸ್ಮಾ ತೆಗೆದು ನೋಡಬೇಕು. ಎಕ್ಸರೇ ಕಣ್ಣಿನಿಂದ ಮಾಧ್ಯಮದವರು ನೋಡಿದ್ರೆ ಹೀಗಾಗುತ್ತದೆ. ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಅನ್ನೋದನ್ನ ಮಾಧ್ಯಮ ಸ್ನೇಹಿತರು ತಿಳಿದುಕೊಳ್ಳಬೇಕು ಅಂತಾ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜತೆ ಇರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಇರುವಾಗ ಹೊಂದಾಣಿಕೆಗೆ ಸಮಯಾವಕಾಶ ಬೇಕಾಗುತ್ತದೆ. ದೇಶದಲ್ಲಿ ವಿವಿಧ ಕಡೆಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಹೀಗೆಯೇ ನಡೆದುಕೊಂಡಿವೆ. ಸರ್ಕಾರ ಟೇಕಾಫ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಸರ್ಕಾರ ಬಜೆಟ್ ಮಂಡಿಸುವ ಮುಂಚಿತವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಲಾಗುತ್ತದೆ. ಹೀಗಾಗಿ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಕೆಲ ಊಹಾಪೋಹಗಳಿರುತ್ತವೆ. ಅವುಗಳಿಗೆ ಉತ್ತರ ಕೊಡಲು ನಮ್ಮಿಂದ ಆಗಲ್ಲ ಅಂತಾ ಸಚಿವ ನಾಡಗೌಡ ಹೇಳಿದ್ದಾರೆ.
ದೇಸಿ ಹಸುಗಳ ಸಾಕಣೆಗೆ ಒತ್ತು
ದೇಸಿ ಹಸುಗಳ ಸಾಕಣೆಗೆ ರಾಜ್ಯದಲ್ಲಿ ಇನ್ನು ಮುಂದೆ ಒತ್ತು ನೀಡುತ್ತೇವೆ. ಹೆಚ್ಚು ಹಾಲು ಕೊಡುವ ಸ್ಥಳೀಯ ಹಸುಗಳಾದ ದೇವಣಿ ತಳಿ ಅಭಿವೃದ್ಧಿಗೆ ಬಳ್ಳಾರಿ ಬಳಿ ಫಾರ್ಮ್ ಮಾಡುವ ಚಿಂತನೆ ಇದೆ. ಶೂನ್ಯ ಬಂಡವಾಳದ ಕೃಷಿ ಮಾಡುವವರೂ ಈ ಹಸು ಸಾಕಣೆ ಮಾಡಬಹುದು. ರಾಜ್ಯದಲ್ಲಿ ಇಸ್ರೇಲ್ ಮಾದರಿಯಲ್ಲಿ ಹೈಡ್ರೋಫೋನಿಕ್ ಸಿಸ್ಟಂ ಅಳವಡಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಇದರ ಅನುಷ್ಠಾನಕ್ಕೆ ಈ ಬಾರಿಯ ಬಜೆಟ್​ನಲ್ಲಿ ಪೈಲಟ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುತ್ತೆ ಎಂದು ಸಚಿವ ನಾಡಗೌಡ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv