ಕುಂದಗೋಳ ತಲುಪಿದ ಸಚಿವ ಶಿವಳ್ಳಿ ಪಾರ್ಥಿವ ಶರೀರ

ಹುಬ್ಬಳ್ಳಿ: ಸಿ.ಎಸ್. ಶಿವಳ್ಳಿಯವರ ಪಾರ್ಥಿವ ಶರೀರ ಹುಬ್ಬಳಿ ನಿವಾಸದಲ್ಲಿ ಅಂತಿಮ‌ ದರ್ಶನ ಪಡೆದ ಮೇಲೆ ನಗರದ ಗಬ್ಬೂರು ಬೈಪಾಸ್ ಮೂಲಕ ಅದರಗುಂಚಿ, ನೂಲ್ವಿ ಮಾರ್ಗವಾಗಿ ಕುಂದಗೋಳಕ್ಕೆ ಪಾರ್ಥಿವ ಶರೀರ ಸಾಗಿಸಲಾಯಿತು.

ಪಾರ್ಥಿವ ಶರೀರದ ಜೊತೆಗೆ ಪತ್ನಿ, ಪುತ್ರ ಹಾಗೂ ಪುತ್ರಿಯರು, ಮನಸೂರು ರೇವಣಸಿದ್ದೇಶ್ಚರ ಮಠದ ಬಸವರಾಜ್ ದೇವರು ತೆರಳಿದರು. ಪಾರ್ಥಿವ ಶರೀರ ಸಾಗುವ ಮಾರ್ಗದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅಂತಿಮ ದರ್ಶನ ಪಡೆದುಕೊಂಡರು. ರಾತ್ರಿ 11 ಘಂಟೆ ವರೆಗೆ ಕುಂದಗೋಳದ ಖಾಸಗಿ ಶಾಲಾ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.

ಬಳಿಕ ಸ್ವಗ್ರಾಮ ಯರಗುಪ್ಪಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ನಾಳೆ ಸಂಜೆ 5 ಘಂಟೆ ನಂತರ ಕುರುಬ ಸಮುದಾಯದ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನಡೆಯಲಿದೆ. ಯರಗುಪ್ಪಿ ಗ್ರಾಮದ ಶಿವಳ್ಳಿಯವರ ಜಮೀನಿನಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಶಿವಳ್ಳಿಯವರ ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಲಾಗಿದೆ. ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಅವರು ಸ್ಥಳ ಪರಿಶೀಲನೆ ನಡೆಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv