‘ನಮ್ಮದೇನಿದ್ದರೂ ಕೆಲಸ ಮಾತ್ರ, ಆಪರೇಷನ್ ಕಮಲದ ಬಗ್ಗೆ ಗೊತ್ತಿಲ್ಲ’

ಬೆಳಗಾವಿ:  ನಮ್ಮದೇನಿದ್ದರೂ ಅಭಿವೃದ್ಧಿ ಮತ್ತು ಇಲಾಖೆ ಕೆಲಸದ ಬಗ್ಗೆ ಅಷ್ಟೇ ನಿಗಾ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ನಮ್ಮ ಅವಧಿಯಲ್ಲಿ ಪ್ರವಾಸೋದ್ಯಮ, ಅರಣ್ಯ ರಕ್ಷಣೆ ಮಾಡುತ್ತೇವೆ. ಅದಕ್ಕೆ ಕಾಲಾವಕಾಶ ಬೇಕು. ಕಾನೂನು ಬದ್ಧವಾಗಿ ಹೆಚ್ಚು ಹಕ್ಕುಪತ್ರಗಳನ್ನ ನೀಡಿದ್ದೇವೆ. ಈಡೀ ರಾಜ್ಯಾದ್ಯಂತ ಹಕ್ಕು ಪತ್ರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಬಿಜೆಪಿ ಸಮ್ಮಿಶ್ರ ಸರ್ಕಾರ ವನ್ನು ಅಸ್ಥಿರ ಗೊಳಿಸುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಸ್ವಾಭಾವಿಕ ಅದನ್ನ ಬ್ಲೇಮ್ ಮಾಡೋಕೆ ಆಗಲ್ಲ. ತಂತ್ರಗಾರಿಕೆ ರಾಜಕೀಯದಲ್ಲಿ ಇದ್ದೆ ಇರುತ್ತೆ. ಜೆಪಿಯವರು ಏನೇ ಮಾಡಿದ್ರು, ನಮ್ಮ ಶಾಸಕರು ಯಾರೂ ಹೋಗಲ್ಲ. ಇದು ಊಹಾಪೋಹ ಅಷ್ಟೇ. ನಮ್ಮ ಸರ್ಕಾರ ಸುಭದ್ರವಾಗಿದೆ. ರಾಜಕೀಯ ಪ್ರಯತ್ನ ಇದ್ದೇ ಇರುತ್ತೆ ಆದ್ರೆ ಯಶಸ್ವಿಯಾಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಸಂಕ್ರಾಂತಿ ನಂತರ ಕ್ರಾಂತಿ ಆಗುತ್ತೆ‌ ಎಂಬ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ಆದರೆ ಆಯ್ತು ಆದಾಗ ನೋಡೋಣ. ರಾಜ್ಯನೂ ಇಲ್ಲೇ ಇರುತ್ತೆ ದೇಶನೂ ಇಲ್ಲೇ ಇರುತ್ತೆ ಎನೂ ಆಗಲ್ಲ. ಕ್ರಾಂತಿ ಆದ್ರೂ ನಾವು ಇಲ್ಲೇ ಇರ್ತೇವೆ‌ ಅದೆಲ್ಲ ನಡಿತಾನೇ ಇರುತ್ತೆ ಎಂದರು. ಸಿಎಂ ಕುಮಾರಸ್ವಾಮಿ ಅತೃಪ್ತ ಶಾಸಕರ ಬಾಯಿಗೆ ಬೀಗ ಹಾಕಬೇಕು ಎಂಬ ವಿಚಾರದ ಬಗ್ಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಏನೂ ಚರ್ಚೆ ಆಗಿಲ್ಲ, ಅಲ್ಲಿ ಐವತ್ತು ವಿಷಯವಿತ್ತು, ಅದನ್ನೇ ಮುಗಿಸಲು ಸಮಯವಾಯಿತು. ಪುಟ್ಟರಂಗಶೆಟ್ಟಿ ವಿಚಾರವಾಗಲಿ, ಬೇರೆ ವಿಚಾರವಾಗಲಿ ಚರ್ಚೆಗೆ ಬಂದಿಲ್ಲ ಎಂದು ಸಚಿವರು ತಿಳಿಸಿದರು.

ರಾಮಮಂದಿರ ಬರೀ ಬಿಜೆಪಿ ಅವರದಷ್ಟೇ ಅಲ್ಲ. ಬಿಜೆಪಿಯವರು ಅದನ್ನ ಗುತ್ತಿಗೆ ಹಿಡಿದಿಲ್ಲ. ಎಲ್ಲರ ಹಕ್ಕಿದೆ, ರಾಮಮಂದಿರ ಆಗಬಾರದು ಎಂದು ಯಾರೂ ವಿರೋಧ ಮಾಡಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv