‘ಜಿ.ಟಿ. ದೇವೇಗೌಡ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’

ಬೆಂಗಳೂರು: ಮೈಸೂರು ದಸರಾ ಉತ್ಸವದಲ್ಲಿ ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಅಂತಾ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗ ಶೆಟ್ಟಿ ಆರೋಪಿಸಿದ್ದಾರೆ.

ದಸರಾ ಉತ್ಸವದಲ್ಲಿ ನನ್ನನ್ನು ಕಡೆಗಣಿಸಲು ಪ್ರಮುಖ ಕಾರಣ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು. ಜಿ.ಟಿ.ದೇವೇಗೌಡ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಮನಸ್ಸಿಗೆ ಬಂದಂತೆ ದಸರಾ ಸಮಿತಿಗಳನ್ನ ರಚಿಸಿದ್ದಾರೆ. ಹಾಗಾಗಿ ನಾನು ದಸರಾ ಉತ್ಸವದಲ್ಲಿ ಪಾಲ್ಗೊಂಡಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ ಮೈಸೂರು ದಸರಾ ವಿಚಾರವಾಗಿ ಚಾಮರಾಜನಗರದಲ್ಲಿ ಸಭೆ ನಡೆದಿತ್ತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿರುವ ನನಗೆ ಮೈಸೂರು ದಸರಾದಲ್ಲಿ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಆಮಂತ್ರಣ ಪತ್ರದಲ್ಲಿ ನನ್ನ ಹೆಸರು ಹಾಗೂ ಫೋಟೋವನ್ನು ಕೂಡ ಸೇರಿಸಿಲ್ಲ. ನಿಮ್ಮ ಇಷ್ಟ ಬಂದ ಹಾಗೆ ಸಮಿತಿ ರಚನೆ ಮಾಡಿದ್ದೀರಿ ಎಂದು ಸಚಿವ ಪುಟ್ಟರಂಗ ಶೆಟ್ಟಿ ಅವರು ಜಿ.ಟಿ. ದೇವೇಗೌಡರನ್ನ ಕೆಲ ದಿನಗಳ ಹಿಂದೆ ತರಾಟೆಗೆ ತಗೆದುಕೊಂಡಿದ್ದರು. ಇನ್ನು ದಸರಾ ಉತ್ಸವ ಆಚರಣೆಯಲ್ಲಿ ಪುಟ್ಟರಂಗ ಶೆಟ್ಟಿ ಮಾತ್ರವಲ್ಲದೇ, ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರೂ ದೂರ ಉಳಿದಿದ್ದು, ಜೆಡಿಎಸ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.