ವೈಮನಸ್ಸು ಬಿಟ್ಟು ಒಂದಾಗಿ: ಜಿ.ಟಿ. ದೇವೇಗೌಡ ಕರೆ

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಜಿದ್ದಾಜಿದ್ದಿನ ಹೋರಾಟ ಮಾಡಿದ್ದವು. ಯಾರಿಗೂ ಬಹುಮತ ಬಾರದ ಹಿನ್ನೆಲೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕೊಟ್ಟ ಕೆಲಸಗಳನ್ನು ಕುಮಾರಸ್ವಾಮಿ ಮುಂದುವರೆಸಿದ್ದಾರೆ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಕೆ.ಆರ್.ನಗರದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡ, ಕೆ.ಆರ್.ನಗರದಲ್ಲಿ ಸಾ.ರಾ. ಹಾಗೂ ರವಿಶಂಕರ್ ಜಿದ್ದಾ ಜಿದ್ದಿ ಹೋರಾಟ ಮಾಡಿದ್ರು. ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ಕಾಂಗ್ರೆಸ್, ಜೆಡಿಎಸ್ ಎದುರಾಳಿಗಳು ಒಂದಾಗಿದ್ದೇವೆ. ನಾನು, ಸಿದ್ದರಾಮಯ್ಯ ನಾಳೆ ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಇಡೀ ದಿನ ಪ್ರಚಾರ ಮಾಡುತ್ತೇವೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಎಂಪಿ ಆಗಲು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಿದೆ. ನಮ್ಮ ಎಲ್ಲ ಕಾರ್ಯಕರ್ತರೂ ಮೈತ್ರಿ ಅಭ್ಯರ್ಥಿಯನ್ನ ಬೆಂಬಲಿಸಿ. ಕೇಂದ್ರದ ಮೋದಿ ಸರ್ಕಾರದಿಂದ ಉದ್ಯೋಗ ಸೃಷ್ಟಿಯಾಗಿಲ್ಲ. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ರಾಷ್ಟ್ರೀಯ ಮಟ್ಟದಲ್ಲಿ ಹೆಚ್.ಡಿ. ದೇವೇಗೌಡರು ರಾಜಕಾರಣ ಮಾಡಬೇಕು. ಹೀಗಾಗಿ ಕಾರ್ಯಕರ್ತರು ತಮ್ಮ ವೈಮನಸ್ಸು ಬಿಟ್ಟು ಒಂದಾಗಿ ಎಂದು ಹೇಳಿದರು.

ನಂತರ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್, ಮೋದಿ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಅಧಿಕಾರಕ್ಕಾಗಿ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸುಮಾರು 70 ವರ್ಷ ಆಡಳಿತ ಮಾಡಿದೆ. 6 ಯುದ್ಧಗಳು ನಡೆಸಿದ್ದರೂ ನಾವು ಎಂದೂ ಸೈನ್ಯವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಬಿಜೆಪಿ ದೇಶದಲ್ಲಿ ಮೋದಿ ಅರಾಜಕತೆ ಹುಟ್ಟುಹಾಕುತ್ತಿದೆ. ನೋಟು ಅಮಾನ್ಯೀಕರಣದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಗಡಿಯಲ್ಲಿ ಮೋದಿ ಸೇನೆ ರಕ್ಷಣೆ ಮಾಡುತ್ತಿದೆ ಅಂತಾ ಉತ್ತರ ಪ್ರದೇಶದ ಸಿಎಂ ಯೋಗಿನಾಥ್ ಹೇಳುತ್ತಾರೆ. ಅದು ಮೋದಿ ಸೈನ್ಯ ಅಲ್ಲ. ಅದು ಭಾರತ ದೇಶದ ರಕ್ಷಕರು. ಸಾಮಾಜಿಕ ಜಾಲತಾಣದಲ್ಲಿ ಸೈನಿಕರನ್ನು ರಾಜಕೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಡವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ಅಕೌಂಟ್​​ಗೆ ಹಾಕಲಿದ್ದೇವೆ. ಒಂದು ವರ್ಷಕ್ಕೆ 72 ಸಾವಿರ ರೂಪಾಯಿ ನೀಡಲಿದ್ದೇವೆ. ಇನ್ನೂ ಹತ್ತು ಹಲವಾರು ಯೋಜನೆಗಳನ್ನು ನೀಡಲಿದ್ದೇವೆ. ಮೈತ್ರಿ ಪಕ್ಷವನ್ನು ಬೆಂಬಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv