ಜಾರಕಿಹೊಳಿ ಸಹೋದರರಿಗೆ ಸಚಿವ ಸ್ಥಾನ, ಮುಂದುವರೆದ ಸಂಪ್ರದಾಯ..!

ಬೆಳಗಾವಿ : ಬಹುನಿರೀಕ್ಷಿತ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಂಪುಟ ವಿಸ್ತರಣೆ ಇಂದು ನಡೆದಿದೆ. ಕೊನೆ ಘಳಿಗೆಯಲ್ಲಿ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಗೆ ಪ್ರಾತಿನಿಧ್ಯ ಸಿಕ್ಕಿದೆ. ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಸಂಪುಟ ದರ್ಜೆಗೆ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2004ರ ನಂತರ ರಚನೆಯಾದ ಎಲ್ಲಾ ಸಂಪುಟದಲ್ಲಿ ಜಾರಕಿಹೊಳಿ ಸಹೋದರರು ಇರಲೇ ಬೇಕು ಎನ್ನುವ ಸಂಪ್ರದಾಯ ಮುಂದುವರೆದಿದೆ.
ಗೋಕಾಕ್ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಕಳೆದ 5 ಭಾರೀ ಕ್ಷೇತ್ರದಲ್ಲಿ ಸತತವಾಗಿ ಜಯಗಳಿಸಿದ್ದಾರೆ. ಕಳೆದ ಭಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ಕೈಗಾರಿಕೆ ಮತ್ತು ಸಹಕಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಈ ಬಾರೀ ಸಚಿವ ಸ್ಥಾನಕ್ಕಾಗಿ ರಮೇಶ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ತೀವ್ರ ಪೈಪೋಟಿ ನೀಡಿದ್ರು. ಕೊನೆ ಕ್ಷಣದಲ್ಲಿ ರಮೇಶ ಜಾರಕಿಹೊಳಿಗೆ ಸಚಿವ ಪಟ್ಟ ಸಿಕ್ಕಿದೆ.

ಪ್ರತಿ ಸರ್ಕಾರದಲ್ಲೂ ಜಾರಕಿಹೊಳಿ ಸಹೋದರರು ಇರಲೇಬೇಕು
2004ರಿಂದ ಇತ್ತೀಚಿಗೆ ಬಂದ ಬಹುತೇಕ ಎಲ್ಲಾ ಸರ್ಕಾರಗಳಲ್ಲಿಯೂ ಜಾರಕಿಹೊಳಿ ಸಹೋದರರು ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪ್ರಥಮವಾಗಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜವಳಿ ಸಚಿವರಾಗುವ ಮೂಲಕ ಸತೀಶ ಜಾರಕಿಹೊಳಿ ಸಂಪ್ರದಾಯ ಆರಂಭಿಸಿದ್ರು. ನಂತರ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿ ಕೆಲಸ ಮಾಡಿದ್ರು. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆಗ ಜೆಡಿಎಸ್ ನಲ್ಲಿ ಇದ್ದ ಬಾಲಚಂದ್ರ ಜಾರಕಿಹೊಳಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾಗಿ ಮಂತ್ರಿಯಾಗಿದ್ರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಅಬಕಾರಿ ಸಚಿವರಾಗಿ ಆಯ್ಕೆಯಾಗಿದ್ದರು. ಆದರೆ ಖಾತೆ ಬದಲಾವಣೆಗೆ ಆಗ್ರಹಿಸಿ ರಾಜೀನಾಮೆ ನೀಡಿದ್ರು. ನಂತರ ಸಣ್ಣ ಕೈಗಾರಿಕೆ ಖಾತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ವೇಳೆಯಲ್ಲಿ ಸತೀಶ ಕೈಬಿಟ್ಟು ರಮೇಶ್‌ಗೆ ಅವಕಾಶ ಕೊಡಲಾಗಿತ್ತು. ಇದೀಗ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ರಮೇಶ ಜಾರಕಿಹೊಳಿಗೆ ಸಚಿವರಾಗೋ ಅವಕಾಶ ಸಿಕ್ಕಿದೆ.

ಅಸಮಾಧಾನಗೊಂಡ ಸತೀಶ್ ಜಾರಕಿಹೊಳಿ
ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ನಿನ್ನೆಯವರೆಗೆ ಸತೀಶ್ ಜಾರಕಿಹೊಳಿ ಹೆಸರಿತ್ತು. ಆದರೆ ಕೊನೇ ಘಳಿಗೆಯಲ್ಲಿ ಸತೀಶ್ ಜಾರಕಿಹೊಳಿಗೆ ಹೆಸರು ಕೈಬಿಟ್ಟು ರಮೇಶ್‌ಗೆ ಅವಕಾಶ ನೀಡಲಾಗಿದೆ. ಇದು ಸತೀಶ ಜಾರಕಿಹೊಳಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಾರೀ ಯಮಕನಮರಡಿ ಕ್ಷೇತ್ರ ಬಿಟ್ಟು, ಇನ್ನುಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ರು. ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಬದಾಮಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ರು.
ಎಚ್ ಡಿ ಕುಮಾರಸ್ವಾಮಿ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಸತೀಶ ಜಾರಕಿಹೊಳಿಗೆ ತೀವ್ರ ನಿರಾಸೆಯಾಗಿದೆ. ಇನ್ನೂ ಸಚಿವ ಸಂಪುಟದಲ್ಲಿ ಕೈಬಿಟ್ಟ ಹಿನ್ನಲೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾಕೆ ನನ್ನ ಹೆಸರು ಕೈಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ವಿಸ್ತರಣೆ ಪ್ರಕ್ರಿಯೆ ಮುಗಿದ ಬಳಿಕ ಹೈಕಮಾಂಡ್ ಜತೆಗೆ ಚರ್ಚೆ ಮಾಡುತ್ತೆನೆ ಎಂದಿದ್ದಾರೆ.