‘ಡಿಎಲ್​​ಎಫ್ ಕಬಳಿಸಿರುವ ಸರ್ಕಾರಿ ಸ್ವತ್ತಿಗೆ ಡಿ.ಕೆ.ಎಸ್ ರಕ್ಷಣಾ ಬೇಲಿ’

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್​ಎಫ್​ ಸಂಸ್ಥೆ ಕಬಳಿಸಿರುವ ₹ 7 ಸಾವಿರ ಕೋಟಿ ಮೌಲ್ಯದ 1100 ಎಕರೆ ಸರ್ಕಾರಿ ಸ್ವತ್ತಿಗೆ ಸಚಿವ ಡಿ.ಕೆ.ಶಿವಕುಮಾರ್ ಸಾರಥ್ಯದಲ್ಲಿ ರಕ್ಷಣಾ ಬೇಲಿ ಹಾಕಲಾಗುತ್ತಿದೆ ಅಂತಾ ಬಿಜೆಪಿ ಬೆಂಗಳೂರು ಘಟಕದ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಬರ್ಟ್ ವಾದ್ರಾ ಪಾಲುದಾರಿಕೆಯ ಡಿಎಲ್​ಎಫ್​ ಸಂಸ್ಥೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ₹ 7,000 ಕೋಟಿ ಮೌಲ್ಯದ 1,100 ಎಕರೆ ಪ್ರದೇಶ ಕಬಳಿಸಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿಯ ಗಂಗೇನಹಳ್ಳಿ, ವರ್ತೂರು, ವರ್ತೂರು ನರಸೀಪುರ, ಮತ್ತು ಪೆದ್ದನಪಾಳ್ಯ ಗ್ರಾಮಗಳಲ್ಲಿರುವ 1,100 ಎಕರೆ ಭೂ ಕಬಳಿಕೆಯಾಗಿದೆ. ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 01 ರಿಂದ 99, ವರ್ತೂರು ಗ್ರಾಮದ ಸರ್ವೇ ನಂಬರ್ 07,08,09,10, ವರ್ತೂರು ನರಸೀಪುರ ಗ್ರಾಮದ ಸರ್ವೇ ನಂಬರ್ 01 ರಿಂದ 35, ಮತ್ತು ಪೆದ್ದನಪಾಳ್ಯ ಗ್ರಾಮದ ಸರ್ವೇ ನಂಬರ್ 17,18,19,20 ರಲ್ಲಿರುವ ಸುಮಾರು 1,100 ಎಕರೆ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಅಂತಾ ಆರೊಪಿಸಿದ್ದಾರೆ. ಇನ್ನು ಕನಿಷ್ಟ 12 ವರ್ಷಗಳ ಕಾಲ ಸಾಗುವಳಿ ಮಾಡಿರುವ ಜಮೀನು ರಹಿತ ರೈತರಿಗೆ ಮಾತ್ರ ನೀಡಬೇಕಿರುವ ಸರ್ಕಾರಿ ಭೂಮಿ ಅದು. ಸರ್ಕಾರಿ ಜಮೀನುಗಳ ಮ್ಯೂಟೆಶನ್‌ ರಿಜಿಸ್ಟರ್‌ಗಳನ್ನು ಸ್ಥಳೀಯರಲ್ಲದ ಡಿಎಲ್​ಎಫ್​ ಸಂಸ್ಥೆಗೆ ನೀಡಲಾಗಿದೆ ಎಂದು ಆರೋಪಿಸಿದರು.
ಸ್ಥಳೀಯರಲ್ಲದ ಮತ್ತು ಸಾಗುವಳಿ ಚೀಟಿಗಳನ್ನು ಹೊಂದಿಲ್ಲದಂತಹ ಜನರಿಗೆ ಮ್ಯೂಟೆಶನ್‌ ರಿಜಿಸ್ಟರ್‌ ನೀಡುವುದಾಗಲೀ, ಸರ್ಕಾರಿ ಜಮೀನುಗಳನ್ನು ಹಂಚಿಕೆ ಮಾಡುವುದಾಗಲಿ ಅಪರಾಧ. ಡಿಎಲ್​ಎಫ್​ ಸಂಸ್ಥೆಯ ಕೆ.ಪಿ.ಸಿಂಗ್, ಆರ್​.ಕೆ.ಬುಧವಾರ್, ಆರ್​.ಕೆ.ಖನ್ನಾ, ಸುಖವಂತ್ ಸಿಂಗ್, ಭೂಪೇಂದ್ರ ಸಿಂಗ್, ಲಾಲ್ ಶರ್ಮ ಮೊದಲಾದವರಿಗೆ ಮ್ಯೂಟೆಶನ್‌ ರಿಜಿಸ್ಟರ್‌ ಗಳನ್ನು ನೀಡಲಾಗಿದೆ. ಡಿಎಲ್ಎಫ್​​ ಸಂಸ್ಥೆಯಿಂದ ಅಪಾರ ಪ್ರಮಾಣದ ಲಂಚವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಪಡೆದಿದ್ದಾರೆ ಎಂದು ಎನ್‌.ಆರ್‌.ರಮೇಶ್ ಆರೋಪಿಸಿದರು.

ರಾಬರ್ಟ್ ವಾದ್ರಾ ಮತ್ತು ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಪ್ರಭಾವಗಳಿಗೆ ಅಧಿಕಾರಿಗಳು ಮಣಿದಿದ್ದಾರೆ. ವಾದ್ರಾ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಎಸಿಬಿ, ಬಿಎಂಟಿಎಫ್​ ಮತ್ತು ಲೋಕಾಯುಕ್ತಗಳಲ್ಲಿ ದೂರು ದಾಖಲಾಗಿದೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv