ಸಿ.ಎಸ್​​​. ಶಿವಳ್ಳಿ -ಬಂಗಾರಪ್ಪ ಗರಡಿಯ ಬಳ್ಳಿ..!

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್.​​ ಶಿವಳ್ಳಿ (58) ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನ ಅವರಿಗೆ ಹೃದಯಾಘಾತವಾದ ಹಿನ್ನೆಲೆ ಹುಬ್ಬಳ್ಳಿಯ ಲೈಫ್​ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಸಚಿವರು ಕೊನೆಯುಸಿರೆಳೆದಿದ್ದಾರೆ.

ಸಿ.ಎಸ್​. ಶಿವಳ್ಳಿ ಅವರ ರಾಜಕೀಯ ಚಿತ್ರಣ:
ಶಿವಳ್ಳಿ ಅವರು ಮಾಜಿ ಸಿಎಂ ಬಂಗಾರಪ್ಪರಿಂದ ಸ್ಪೂರ್ತಿ ಪಡೆದು ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಬಂಗಾರಪ್ಪ ಗರಡಿಯಲ್ಲಿ ಶಿವಳ್ಳಿ ಕೂಡ ಪಳಗಿದ್ದವರು. ಯರಗುಪ್ಪಿ ಗ್ರಾಮದ ರೈತ ಸತ್ಯಪ್ಪ ಹುಚ್ಚಪ್ಪನವರ ಹಿರಿಯ ಪುತ್ರನ್ನಾಗಿ ಜನಿಸಿದ ಶಿವಳ್ಳಿಯವರು ರಾಜಕೀಯಕ್ಕೆ ಬರುವುದಕ್ಕೂ ಮೊದಲು ಕುಂದಗೋಳದಲ್ಲಿ ಡಾ.ರಾಜ್ ಕುಮಾರ್ ‌ಸಂಘದ ಅಧ್ಯಕ್ಷರಾಗಿದ್ದರು.

ಬಂಗಾರಪ್ಪರೊಂದಿಗೆ ಒಡನಾಟ
ಬಂಗಾರಪ್ಪರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಶಿವಳ್ಳಿ ಅವರು ಮೊದಲಿಗೆ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದರು. 1994ರಲ್ಲಿ ಸ್ಪರ್ಧಿಸಿದ್ದ ಶಿವಳ್ಳಿ ಸೋಲು ಅನುಭವಿಸಿದ್ದರು. ಬಳಿಕ 1999ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಕಣಕ್ಕಿಳಿದು ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

2004ರಲ್ಲಿ ಕಾಂಗ್ರೆಸ್​​ ಪಕ್ಷದಿಂದ ‌ಕಣಕ್ಕಿಳಿಯಲು ಯತ್ನಿಸಿದರೂ ಸಿಕ್ಕಿರಲಿಲ್ಲ. 2008ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಶಿವಳ್ಳಿ ಕಣಕ್ಕಿಳಿದಿದ್ದರು. ಆದರೆ, ಆರು ಸಾವಿರ ಮತಗಳ ಅಂತರದಿಂದ ಸೋತಿದ್ದರು. 2013ರಲ್ಲಿ ಮತ್ತೆ ಕಾಂಗ್ರೆಸ್​​ನಿಂದ ಸ್ಪರ್ಧಿಸಿ, ಸಿದ್ದರಾಮಯ್ಯ ಸಹಕಾರದಿಂದ ಶಿವಳ್ಳಿ ಗೆದಿದ್ದರು. ಕಳೆದ 2018ರಲ್ಲಿ ನಡೆದ ಚುನಾವಣೆಯಲ್ಲೂ ಶಿವಳ್ಳಿ ಗೆಲುವು ಸಾಧಿಸಿದ್ದರು. ಸಮ್ಮಿಶ್ರ ಸರ್ಕಾರದ ಆರಂಭದಲ್ಲಿ ಸಚಿವ ಸ್ಥಾನಕ್ಕೆ ಹರಸಾಹಸ ನಡೆಸಿದರೂ ಅವಕಾಶ ಸಿಗದಿದ್ದಾಗ ಎರಡನೇ ಹಂತದ ಪುನಾರಚನೆ ವೇಳೆ ಪೌರಾಡಳಿತ ಸಚಿವರಾಗಿ ಆಯ್ಕೆ ಆಗಿದ್ದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv