ಪೌರಾಡಳಿತ ಸಚಿವ ಸಿ.ಎಸ್​.ಶಿವಳ್ಳಿ ಇನ್ನಿಲ್ಲ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್.​​ ಶಿವಳ್ಳಿ(58) ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನ ಅವರಿಗೆ ಹೃದಯಾಘಾತವಾದ ಹಿನ್ನೆಲೆ ಹುಬ್ಬಳ್ಳಿಯ ಲೈಫ್​ಲೈನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಚಿವರು ಕೊನೆಯುಸಿರೆಳೆದಿದ್ದಾರೆ.

ನಾಲ್ಕು ದಿನಗಳ ಹಿಂದೆ ಧಾರವಾಡದಲ್ಲಿ ಐದಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಕಟ್ಟಡದ ಅವೇಶಷಗಳಡಿ ಸಿಲುಕಿದವರ ರಕ್ಷಣಾಕಾರ್ಯ ನಡೆಯುತ್ತಿದೆ. ಈ ರಕ್ಷಣಾಕಾರ್ಯದ ಜವಾಬ್ದಾರಿಯನ್ನ ಖುದ್ದು ಸಚಿವರೇ ನೋಡಿಕೊಂಡಿದ್ದರು. ಸ್ಥಳದಲ್ಲಿಯೇ ನಿಂತು ರಕ್ಷಣಾಕಾರ್ಯದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಕಳೆದ ನಾಲ್ಕು ದಿನಗಳಿಂದ ಸಚಿವ ಶಿವಳ್ಳಿ ಬಳಲಿದ್ದರು. ಅಲ್ಲದೇ ಅವರಿಗೆ ಮಧುಮೇಹ ಕೂಡ ಇತ್ತು ಎನ್ನಲಾಗಿದ್ದು, ಅದಕ್ಕೂ ಚಿಕಿತ್ಸೆ ಪಡೆಯುತ್ತಿದ್ದರು.

ಸಿ.ಎಸ್ ಶಿವಳ್ಳಿಯವರ ಪೂರ್ಣ ಹೆಸರು ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ. ಸಚಿವ ಶಿವಳ್ಳಿ ಕುಂದಗೋಳ ಕ್ಷೇತ್ರದಿಂದ 3 ಬಾರಿ ಶಾಸಕರಾಗಿದ್ದರು.  1999ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಶಾಸಕರಾಗಿದ್ದರು. ನಂತರ 2014, 2018ರಲ್ಲಿ ಕಾಂಗ್ರೆಸ್​​ನಿಂದ ಕಣಕ್ಕಿಳಿದು ಜಯಗಳಿಸಿದ್ದರು. ಸಚಿವ ಸಿಎಸ್ ಶಿವಳ್ಳಿ ಅಗಲಿಕೆಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಸಿ.ಎಸ್​​​. ಶಿವಳ್ಳಿ ಅವರ ಪರಿಚಯ
ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ 12-11-1962ರಲ್ಲಿ ಕುರುಬ ಸಮುದಾಯದಲ್ಲಿ ಜನಿಸಿದ್ದರು. ಸತ್ಯಪ್ಪ-ಗಂಗಮ್ಮ ಎಂಬ ದಂಪತಿಯ ಮಗನ್ನಾಗಿ ಹುಟ್ಟಿದ್ದ ಸಿ.ಎಸ್​​. ಶಿವಳ್ಳಿ ಅವರಿಗೆ ಎಂಟು ಜನ ಸಹೋದರ, ಸಹೋದರಿಯದ್ದರು. ಷಣ್ಮುಖಪ್ಪ, ಮುತ್ತು, ಅಡಿವೆಪ್ಪ ಸಹೋದರರು. ಮೂವರು ಸಹೋದರಿಯರಿದ್ದಾರೆ. ಶಿವಳ್ಳಿಯವರು ಬಿಎ ಪದವಿ ಮುಗಿಸಿದ್ದಾರೆ. ಶಿವಳ್ಳಿಯವರ ಪೂರ್ಣ ಹೆಸರು ಚನ್ನಬಸಪ್ಪ ಎಸ್​​. ಶಿವಳ್ಳಿ. ಇನ್ನು, ಶಿವಳ್ಳಿ ಕುಸುಮಾ ಎಂಬುವರನ್ನು ವಿವಾಹವಾಗಿದ್ದರು. ಪುತ್ರ ಅಮರಶಿವ ಹಾಗೂ ದೀಪಾ, ರೂಪಾ ಇಬ್ಬರು ಪುತ್ರಿಯರು ಇದ್ದಾರೆ.