ಮತ್ತೊಂದು ಮಧ್ಯರಾತ್ರಿ ತೀರ್ಪು .! ಕಾರ್ತಿಗೆ ಸಿಕ್ತು ಮಧ್ಯಂತರ ಜಾಮೀನು

ಚೆನ್ನೈ: ಕರ್ನಾಟಕ ಸರ್ಕಾರ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೇ 17ರಂದು ರಾತ್ರೋರಾತ್ರಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದು ಈಗ ಇತಿಹಾಸ. ಇದರ ಬೆನ್ನಲ್ಲೇ ಮದ್ರಾಸ್​​​ ಹೈಕೋರ್ಟ್ ಕೂಡ​ ನಿನ್ನೆ ರಾತ್ರಿಕಾಲದ ವಿಚಾರಣೆ ನಡೆಸಿ, ಆದೇಶ ಕೂಡ ನೀಡಿದೆ. ಮಾಜಿ ವಿತ್ತ ಮಂತ್ರಿ ವಿ ಚಿದಂಬರಂರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಐಟಿ ಇಲಾಖೆ ಅರೆಸ್ಟ್​ ವಾರೆಂಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಜಾಮೀನಿಗೆ ಕಾರ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನ ತಕ್ಷಣವೇ ಕೈಗೆತ್ತಿಕೊಂಡ ನ್ಯಾಯಾಲಯ ಮಧ್ಯಂತರ ಜಾಮೀನು ಕೂಡ ಮಂಜೂರು ಮಾಡಿದೆ.

ಏನಿದು ಪ್ರಕರಣ?
ಕಪ್ಪು ಹಣ ತಡೆ ಕಾಯ್ದೆಯಡಿ ಐಟಿ ಇಲಾಖೆಯು, ಕಾರ್ತಿ ಚಿದಂಬರಂ ವಿರುದ್ಧ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಅರೆಸ್ಟ್​ ವಾರೆಂಟ್​ ಜಾರಿಗೊಳಿಸಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಕಾರ್ತಿ ಚಿದಂಬರಂ, ವಕೀಲರಾದ ಸತೀಶ್​ ಪರಸರನ್​​, ಎಆರ್​ಎಲ್​​ ಸುಂದೆರೆಸನ್​ರ ಮೂಲಕ ಮದ್ರಾಸ್​ ಹೈ ಕೋರ್ಟ್​ಗೆ ಜಾಮೀನಿಗಾಗಿ ಮನವಿ ಸಲ್ಲಿಸುತ್ತಾರೆ. ಈ ಸಂಬಂಧ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಜಗದೀಶ್​ ಚಂದಿರ ಕಾರ್ತಿ ಚಿದಂಬರಂಗೆ ಜೂನ್​ 28ರ ವರಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದ್ದಾರೆ.
ಸದ್ಯ, ಲಂಡನ್​ನಲ್ಲಿರುವ ಕಾರ್ತಿ ಚಿದಂಬರಂ ಇಂದು ಬೆಳಗ್ಗೆ ಭಾರತಕ್ಕೆ ಹೊರಡಲು ಸಿದ್ಧತೆ ನಡೆಸಿದ್ದಾರೆ. ಜಾಮೀನು ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕಾರ್ತಿ, ಕಾನೂನು ಸಮರಕ್ಕೆ ಸಹಕರಿಸಿದ ಕಪಿಲ್​ ಸಿಬಲ್​​, ಡಾ. ಎ.ಎಂ. ಸಿಂಘ್ವಿ, ಗೋಪಾಲ್​ ಸುಬ್ರಮಣಿಯಮ್​​, ಸತೀಶ್​ ಪರಸರನ್​​, ಎಆರ್​ಎಲ್​​ ಸುಂದೆರೆಸನ್​​, ಮೊದಲಾದವರಿಗೆ ಟ್ವೀಟ್​ ಮೂಲಕ ಧನ್ಯವಾದ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv