ಬಾಡಿಗೆ ಕಟ್ಟೋ ಚಿಂತೆಯೇ ಇಲ್ಲ, 22 ವರ್ಷಗಳಿಂದ ಮರಳಿನ ಅರಮನೆಯೇ ಇವರ ಮನೆ..!

ರಿಯೋ ಡಿ ಜನೈರೋ: ಸಮುದ್ರ ತೀರಕ್ಕೆ ಹೋದಾಗ ಮರಳಲ್ಲಿ ಮನೆ ಮಾಡಿ ಮಕ್ಕಳು ಆಟವಾಡೋದು ಕಾಮನ್​. ಆದ್ರೆ ಅದರಲ್ಲಿ ವಾಸ ಮಾಡ್ಬೇಕು ಅಂತ ಅಂದುಕೊಳ್ಳಲ್ಲ. ಅಲೆ ಬಂದ್ರೆ ಆ ಮರಳಿನ ಮನೆ ಉರುಳಿ ಹೋಗುತ್ತೆ ಅಂತ ಗೊತ್ತಿರುತ್ತೆ. ಆದ್ರೆ ಇಲ್ಲೊಬ್ಬರು ಮರಳಿನ ಅರಮನೆ ನಿರ್ಮಿಸಿ 22 ವರ್ಷಗಳಿಂದ ಅದರಲ್ಲೇ ವಾಸಿಸುತ್ತಿದ್ದಾರೆ ಅಂದ್ರೆ ನೀವು ನಂಬಲೇಬೇಕು.

ಹೌದು, ಆಶ್ಚರ್ಯವೆನಿಸಿದ್ರೂ ಇದು ಸತ್ಯ. ರಿಯೋ ಡಿ ಜನೈರೋದಲ್ಲಿ 44 ವರ್ಷದ ಮಾರ್ಸಿಯೋ ಮಿಜೇಲ್​​​ ಮಾಟೋಲಿಯಾಸ್, ಬಾರಾ ಡಾ ತಿಜುಕಾ ಬೀಚ್​​​ನಲ್ಲಿ ​ ಮರಳಿನ ಅರಮನೆ ನಿರ್ಮಿಸಿ ಕಳೆದ 2 ದಶಕಗಳಿಂದ ಅದರಲ್ಲಿ ವಾಸಿಸುತ್ತಿದ್ದಾರೆ. ಅರಮನೆಯೊಂದೇ ಅಲ್ಲ, ಮಾಟೋಲಿಯಾಸ್​ ತನಗಾಗಿ ಸಿಂಹಾಸನವನ್ನೂ ಮಾಡಿಕೊಂಡಿದ್ದಾರೆ. ಸದಾ ಪ್ಲಾಸ್ಟಿಕ್​ ಕಿರೀಟ ತೊಟ್ಟಿರೋ ಮಾಟಾಲಿಯೋಸ್​​ರನ್ನ ಸ್ಥಳೀಯರು ‘ಕಿಂಗ್​ ಮಾರ್ಸಿಯೋ’ ಅಂತ ಕರೆಯುತ್ತಾರೆ.

ರಿಯೋ ಡಿ ಜನೈರೋದ ಬೀಚ್​​ಗಳಲ್ಲಿ ಅಲಂಕಾರಿಕ ಮರಳಿನ ಅರಮನೆಗಳು ಪ್ರವಾಸಿಗರನ್ನ ಆಕರ್ಷಿಸುತ್ತವೆ. ಪ್ರವಾಸಿಗರು ಸ್ಥಳೀಯರಿಗೆ ಹಣ ಕೊಟ್ಟು ಈ ಮಣ್ಣಿನ ಅರಮನೆಗಳೊಂದಿಗೆ ಫೋಟೋ ತೆಗೆಸಿಕೊಳ್ಳೋದು ಕಾಮನ್​ ಆಗಿದೆ. ಆದ್ರೆ ವಾಸ ಮಾಡಲು ಮಣ್ಣಿನ ಅರಮನೆ ನಿರ್ಮಿಸಿರೋ ಮೊದಲ ವ್ಯಕ್ತಿ ಮಾಟಾಲಿಯೋಸ್. ರಿಯೋದಲ್ಲಿ ಬಾಡಿಗೆ ಮನೆಗಳು ತುಂಬಾ ದುಬಾರಿಯಾಗಿದ್ದು, ಮಾಟಾಲಿಯೋಸ್​ ಅವರ ಈ ಶ್ರಮ ಆ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

ತನ್ನ ಈ ಜೀವನಶೈಲಿ ಬಗ್ಗೆ ಮಾಟಾಲಿಯೋಸ್​ಗೆ ತೃಪ್ತಿ ಇದೆ. ನಾನು ಬೇ ಆಫ್ ಗುನಾಬಾರಾದಲ್ಲಿ ಬೆಳೆದೆ. ಸದಾ ಬೀಚ್​ನಲ್ಲೇ ವಾಸಿಸುತ್ತಿದ್ದೆ. ಸಮುದ್ರದ ಬಳಿ ಮನೆ ಮಾಡಲು ಜನ ಭಾರೀ ಮೊತ್ತದ ಬಾಡಿಗೆ ಕೊಡ್ತಾರೆ. ಆದ್ರೆ ನಾನು ಬಾಡಿಗೆ ಕಟ್ಟಬೇಕಿಲ್ಲ. ನನ್ನ ಜೀವನ ಇಲ್ಲಿ ಚೆನ್ನಾಗಿದೆ ಅಂತಾರೆ ಮಾಟಾಲಿಯೋಸ್.

ಇನ್ನು ಮಾಟಾಲಿಯೋಸ್​ ಈ ಮರಳಿನ ಅರಮನೆಯ ಗೋಡೆ ಹಾಗೂ ಗೋಪುರಗಳನ್ನ ಮೇಂಟೇನ್​ ಮಾಡಬೇಕು. ಮರಳು ಉದುರಿಹೋಗದಂತೆ ನೋಡಿಕೊಳ್ಳಲು ನಿಯಮಿತವಾಗಿ ಮನೆಯ ಅಕ್ಕಪಕ್ಕ ನೀರು ಹಾಕುತ್ತಿರಬೇಕು. ಇದಕ್ಕೆ ತುಂಬಾ ತಾಳ್ಮೆಯೂ ಬೇಕು. ಯಾಕಂದ್ರೆ ಒಮ್ಮೆ ಚಂಡಮಾರುತ ಬಂದರೆ ಕೆಲವೇ ನಿಮಿಷಗಳಲ್ಲಿ ಇಡೀ ಮನೆ ನೆಲಸಮವಾಗುತ್ತದೆ. ಆಗ ಮಾಟಾಲಿಯೋಸ್​ ಮತ್ತೆ ಮನೆಯನ್ನ ಕಟ್ಟಬೇಕು. 22 ವರ್ಷಗಳಿಂದ ಇದನ್ನು ಮಾಡಿಕೊಂಡು ಬಂದಿರೋದ್ರಿಂದ ಮಾಟಾಲಿಯೋಸ್​​ಗೆ ಇದೆಲ್ಲಾ ಅಭ್ಯಾಸವಾಗಿಬಿಟ್ಟಿದೆ. ಇವರ ಪ್ರತಿಭೆಯನ್ನ ಗಮನಿಸಿದ ಸ್ಥಳೀಯ ಶಾಪಿಂಗ್​​ ಮಾಲ್​ವೊಂದು ಕೆಲವೊಮ್ಮೆ ಅಲಂಕಾರಿಕ ಮರಳಿನ ಕಲಾಕೃತಿಗಳನ್ನ ಮಾಡಲು ಮಾಟಾಲಿಯೋಸ್​ರನ್ನ ಕೆಲಸಕ್ಕೆ ತೆಗೆದುಕೊಳ್ಳುತ್ತದೆ.

ಮಾಟಾಲಿಯೋಸ್​ ತನ್ನ ಸ್ನೇಹಿತರಿಂದ ಹಾಗೂ ಪುಸ್ತಕಗಳನ್ನ ಓದೋ ಮೂಲಕ ಮರಳಿನ ಮನೆ ಮಾಡಲು ಕಲಿತರಂತೆ. ಪುಸ್ತಕ ಓದೋದು ಇವರ​ ಹವ್ಯಾಸ. ಇದರ ಜೊತೆಗೆ ಗಾಲ್ಫ್​​ ಆಡೋದು ಹಾಗೂ ಮೀನುಗಾರಿಕೆ ಮಾಡೋದು ಕೂಡ ಇವರಿಗೆ ಇಷ್ಟವಂತೆ. ಇವರ​ ಬಳಿ ಪುಸ್ತಕಗಳ ಕಲೆಕ್ಷನ್​ ಕೂಡ ಇದೆ.

ಮರಳಿನ ಮನೆ ಹೊರಗಿನಿಂದ ಅರಮನೆಯಂತೆ ಕಂಡರೂ, ಒಳಗಡೆ ಇರೋದು ಪುಟಾಣಿ ರೂಮ್​​. 32 ಚದರ ಅಡಿಯ ರೂಮಿನಲ್ಲಿ ಮಾಟಾಲಿಯೋಸ್​ರ ಪುಸ್ತಕಗಳೇ ತುಂಬಿ ಹೋಗಿವೆ. ಒಳಗೆ ಮರದ ಕಟ್ಟಿಗೆಗಳನ್ನ ಸಪೋರ್ಟ್​ಗೆ ಇಡಲಾಗಿದೆ. ಜೊತೆಗೆ ಮನೆಯಲ್ಲಿ ಬಾತ್​ರೂಮ್​ ಕೂಡ ಇದ್ದು, ಮಾಟಾಲಿಯೋಸ್​ ಇದರೊಳಗೆ ಸ್ನಾನ ಮಾಡ್ತಾರೆ.

ಪ್ರವಾಸಿಗರು ಹಾಗೂ ಸ್ಥಳೀಯರು ಇಲ್ಲಿಗೆ ಬಂದಾಗ ಮಾಟಾಲಿಯೋಸ್​ ಹಾಗೂ ಅವರ ಅರಮನೆ ಜೊತೆಗೆ ಫೋಟೋ ತೆಗೆಸಿಕೊಳ್ತಾರೆ. ಕೆಲವರು ಹಣ ಕೂಡ ಕೊಟ್ಟು ಹೋಗ್ತಾರೆ. ಈ ಹಣದಿಂದ ಮಾಟಾಲಿಯೋಸ್​ಗೆ ಸ್ವಲ್ಪ ಸಂಪಾದನೆಯೂ ಆಗುತ್ತೆ. ಇದರ ಜೊತೆಗೆ ಮಾಟಾಲಿಯೋಸ್​ ಪುಸ್ತಕಗಳ ವ್ಯಾಪಾರ ಕೂಡ ಮಾಡ್ತಾರೆ. ಜನ ತಮಗೆ ಇಷ್ಟಬಂದಷ್ಟು ಹಣ ಕೊಟ್ಟು ಪುಸ್ತಕಗಳನ್ನ ಖರೀದಿಸಬಹುದು.

ಇನ್ನು ಮರಳಿನ ಅರಮನೆಗೆ ಕೆಲವು ಅನಾನುಕೂಲತೆಯೂ ಇದೆ. ಮರಳು ಉಷ್ಣಾಂಶವನ್ನ ಹಿಡಿದಿಟ್ಟುಕೊಳ್ಳೊದ್ರಿಂದ, ರಿಯೋದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ದಾಟಿದಾಗ ಮನೆಯೊಳಗೆ ಮಲಗೋದು ತುಂಬಾ ಕಷ್ಟ. ತುಂಬಾ ಸೆಕೆ ಇದ್ದಾಗ ಸ್ನೇಹಿತರ ಮನೆಯಲ್ಲಿ ಇರ್ತೀನಿ. ಅದು ಬಿಟ್ಟರೆ ಬೀಚ್​ ಬಳಿಯೇ ಇರೋದು ನನಗೆ ಇಷ್ಟಅಂತಾರೆ ಮಾಟಾಲಿಯೋಸ್.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv