ಖಾಸಗಿ ಜಾಗದಲ್ಲಿ ಕಸ: ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾದ ಪಾಲಿಕೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸ್ವಚ್ಛತೆಯ ಕುರಿತು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಖಾಸಗಿ ಮಾಲೀಕರಿಗೆ ತಮ್ಮ ಜಾಗದಲ್ಲಿ ಬೆಳೆದ ಗಿಡಗಂಟೆಗಳನ್ನು, ಅಲ್ಲಿ ಹಾಕಲಾದ ತ್ಯಾಜ್ಯದ ತೆರವಿಗೆ ಸೂಚನೆ ನೀಡಲಾಗಿತ್ತು. ಆದ್ರೆ ಖಾಸಗಿ ಮಾಲೀಕರು ಸ್ಪಂದನೆ ಮಾಡುತ್ತಿಲ್ಲ. ಹಾಗಾಗಿ ಖಾಸಗಿ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಲು‌ ಪಾಲಿಕೆ ಮುಂದಾಗಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಸುಧೀರ ಸರಾಫ್ ತಿಳಿಸಿದರು.

ಈ ಕುರಿತು ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಅಂದ್ರೆ ಸೆ.11ರಂದು ಪಾಲಿಕೆ ಆಯುಕ್ತರಾದ ಶಕೀಲ್​ ಅಹ್ಮದ್ ಮನವಿ ಮಾಡಿದ್ದರು, ಅಲ್ಲದೇ 15 ದಿನಗಳ ಕಾಲಾವಧಿಯನ್ನು ಕೂಡ ನೀಡಿದ್ದರು. ಆದರೆ 15 ದಿನಗಳ ನಂತರವೂ ಖಾಸಗಿ ಜಾಗದ ಮಾಲೀಕರು ಸ್ವಚ್ಛತಾ ಕ್ರಮ ಕೈಗೊಂಡಿಲ್ಲ ಹಾಗಾಗಿ ಜಾಗದ ಮಾಲೀಕರಿಂದ ದುಪ್ಪಟ್ಟು ದಂಡ ವಸೂಲಿ ಮಾಡುವುದು ಅನಿವಾರ್ಯವಾಗಿದೆ ಎಂದರು. ಹು-ಧಾ ಮಹಾನಗರ ಸ್ವಚ್ಛತಾ ಹಿತದೃಷ್ಟಿಯಿಂದ ಹಾಗೂ ನಗರದ ಸರ್ವಾಂಗೀಣ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇಂತಹ ಕಠಿಣ ಕ್ರಮಗಳು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು. ಅಲ್ಲದೆ ಈಗಾಗಲೇ ಮಹಾನಗರ ಪಾಲಿಕೆಯ ವಾರ್ಡ್‌ ಗಳಲ್ಲಿ ಡೋರ್ ಟು ಡೋರ್ ಅಟೋ, ಟಿಪ್ಪರ್​ಗಳು ಕಸ ಸಂಗ್ರಹಣೆ ಮಾಡುತ್ತವೆ. ಸಂಗ್ರಹ ಮಾಡಿದ ತ್ಯಾಜ್ಯವನ್ನು ಕಾರವಾರ ರಸ್ತೆಯ ತ್ಯಾಜ್ಯ ಸಂಗ್ರಹಣ ಘಟದಲ್ಲಿ ಡಂಪ್ ಮಾಡಲಾಗುತ್ತಿದೆ. ನಗರದಲ್ಲಿ ಉತ್ಪಾದನೆಯಾಗಿತ್ತಿರುವ ತ್ಯಾಜ್ಯ ಸಂಗ್ರಹಣೆಗಾಗಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv